ಕೀವ್: ಉಕ್ರೇನ್ ನ ಡಿನಿಪ್ರೊ ನಗರದ ಮೇಲೆ ರಷ್ಯಾ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, 34 ಮಂದಿ ಗಾಯಗೊಂಡಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರೋರಾತ್ರಿ ನಡೆದ ದಾಳಿಯಲ್ಲಿ ನಾಶಗೊಂಡಿದ್ದ ಮನೆಯೊಂದರ ಅವಶೇಷಗಳ ಕೆಳಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಡಿನಿಪ್ರೊಪೆಟ್ರೊವ್ಸ್ಕ್ ಪ್ರಾಂತೀಯ ಮುಖ್ಯಸ್ಥ ಒಲೆಕ್ಸಾಂದರ್ ಹಂಝಾ ಹೇಳಿದ್ದಾರೆ.
"ಡಿನಿಪ್ರೊ ಹಾಗೂ ಇನ್ನಿತರ ನಗರಗಳ ಮೇಲೆ ರಷ್ಯಾ ಬಹುತೇಕ ಪ್ರತಿ ರಾತ್ರಿ ದಾಳಿ ನಡೆಸುತ್ತಿದೆ" ಎಂದು ರಷ್ಯಾದ ದಾಳಿಯ ಕುರಿತು ಹಂಝಾ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ದಾಳಿಯಲ್ಲಿ ಡಿನಿಪ್ರೊ ನಗರದಾದ್ಯಂತ ಬೆಂಕಿ ಆವರಿಸಿದ್ದು, ಹಲವು ಅಪಾರ್ಟ್‌ಮೆಂಟ್ ಕಟ್ಟಡಗಳು, ವಾಣಿಜ್ಯ ಮಳಿಗೆಗಳು ಹಾಗೂ ಖಾಸಗಿ ಮನೆಗಳು ಹಾನಿಗೀಡಾಗಿ 27 ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯಾಹ್ನ ಡಿನಿಪ್ರೊ ಮೇಲೆ ರಷ್ಯಾ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹಂಝಾ ತಿಳಿಸಿದ್ದಾರೆ. ಅಲ್ಲದೆ, ಈ ದಾಳಿಯಲ್ಲಿ ಮತ್ತೆ ಏಳು ಮಂದಿ ಗಾಯಗೊಂಡಿದ್ದಾರೆ.
ನೈರುತ್ಯ ಉಕ್ರೇನ್ ನ ಒಡೆಸಾ ಪ್ರಾಂತ್ಯದ ಮೇಲೆ ರಾತ್ರೋರಾತ್ರಿ ನಡೆಸಿದ ಡ್ರೋನ್ ದಾಳಿಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಈ ಪ್ರಾಂತ್ಯದ ದಕ್ಷಿಣದಲ್ಲಿರುವ ವಸತಿ ಕಟ್ಟಡಗಳು, ಬಂದರು ಮೂಲಸೌಕರ್ಯಗಳು ಹಾಗೂ ಕಾರುಗಳು ಹಾನಿಗೀಡಾಗಿವೆ ಎಂದು ಶನಿವಾರ ಪ್ರಾಂತೀಯ ಮುಖ್ಯಸ್ಥ ಒಲೆಹ್ ಕೈಪರ್ ತಿಳಿಸಿದ್ದಾರೆ.
ಇದೇ ವೇಳೆ, ರಷ್ಯಾ-ಉಕ್ರೇನ್ ಗಡಿ ಪ್ರಾಂತ್ಯವಾದ ಬೆಲ್ಗೊರೊಡ್ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

