ಇಸ್ಲಮಾಬಾದ್ : ಅಮೆರಿಕದ ಪ್ರತಿನಿಧಿಗಳು ಇಸ್ಲಮಾಬಾದ್‍ಗೆ ಆಗಮಿಸುವ ಮುನ್ನವೇ ಶನಿವಾರ ಸಂಜೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇದಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಇಸ್ಲಮಾಬಾದ್‍ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅರಾಘ್ಚಿ `ಸಂಧಾನಕ್ಕೆ ಒಪ್ಪದೆ ತನ್ನ ಗರಿಷ್ಠ ಬೇಡಿಕೆಗಳಿಗೆ ಅಂಟಿಕೊಂಡವರ ಪ್ರಸ್ತಾಪಗಳನ್ನು ಇರಾನ್ ಒಪ್ಪುವುದಿಲ್ಲ' ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‍ರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದ್ದಾರೆ.
`ಅಮೆರಿಕದ ನಿಯೋಗವನ್ನು ಭೇಟಿಯಾಗಲು ಇರಾನ್ ಇನ್ನೂ ಸಿದ್ಧವಾಗಿಲ್ಲ ಎಂದು ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ಕದನ ವಿರಾಮ ಮತ್ತು ಇರಾನ್ ವಿರುದ್ಧ ಹೇರಿದ ಯುದ್ಧದ ಸಂಪೂರ್ಣ ಅಂತ್ಯಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ನಮ್ಮ ದೇಶದ ತಾತ್ವಿಕ ನಿಲುವುಗಳನ್ನು ಅರಾಘ್ಚಿ ವಿವರಿಸಿದ್ದಾರೆ. ಮುಖ್ಯವಾಗಿ ನಾವು ಹಠವಾದಿಯ ಗರಿಷ್ಠ ಬೇಡಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವುದಾಗಿ ಇರಾನ್‍ನ ವಿದೇಶಾಂಗ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

