ನವದೆಹಲಿ: ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನರನ್ನು ಬಾಧಿಸುವ ಡೆಂಗ್ಯೂ ಜ್ವರಕ್ಕೆ ಶೀಘ್ರದಲ್ಲೇ ಮುಕ್ತಿ ಸಿಗುವ ಸಾಧ್ಯತೆ ಇದೆ. ಜಪಾನ್ ಮೂಲದ ಟಕೆಡಾ (Takeda) ಕಂಪನಿಯ 'ಕ್ಯೂಡೆಂಗಾ' (Qdenga) ಲಸಿಕೆಯ ಆಮದು ಮತ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಮಹಾನಿರ್ದೇಶನಾಲಯದ (DCGI) ವಿಷಯ ತಜ್ಞರ ಸಮಿತಿ (SEC) ಮಹತ್ವದ ಶಿಫಾರಸು ಮಾಡಿದೆ.
ಇದು ಭಾರತದಲ್ಲಿ ಅನುಮೋದನೆ ಪಡೆಯಲಿರುವ ಮೊದಲ ಡೆಂಗ್ಯೂ ಲಸಿಕೆಯಾಗಲಿದ್ದು, ಡೆಂಗ್ಯೂ ನಿಯಂತ್ರಣದಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಿದೆ. ಲಸಿಕೆಯನ್ನು 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ನೀಡಲು ಸಮಿತಿ ಅನುಮೋದನೆ ನೀಡಿದೆ.
ಈ ಹಿಂದೆ ಲಭ್ಯವಿದ್ದ ಲಸಿಕೆಗಳಿಗಿಂತ ಭಿನ್ನವಾಗಿ, 'ಕ್ಯೂಡೆಂಗಾ' ಪಡೆಯುವ ಮೊದಲು ವ್ಯಕ್ತಿಗೆ ಈ ಹಿಂದೆ ಡೆಂಗ್ಯೂ ಬಂದಿದೆಯೇ ಇಲ್ಲವೇ ಎಂದು ಪರೀಕ್ಷಿಸುವ ಅಗತ್ಯವಿಲ್ಲ. ಇದು ನಾಲ್ಕೂ ವಿಧದ ಡೆಂಗ್ಯೂ ವೈರಸ್‌ಗಳ (DENV-1 ರಿಂದ DENV-4) ವಿರುದ್ಧ ರಕ್ಷಣೆ ನೀಡುತ್ತದೆ.
ಇದು ಎರಡು ಡೋಸ್‌ಗಳ ಲಸಿಕೆಯಾಗಿದ್ದು, ಮೊದಲ ಡೋಸ್ ನೀಡಿದ ಮೂರು ತಿಂಗಳ ನಂತರ ಎರಡನೇ ಡೋಸ್ ನೀಡಬೇಕಾಗುತ್ತದೆ.
ಸುರಕ್ಷತೆ ಮತ್ತು ಪರಿಣಾಮಕಾರಿತ್ವ:ಈ ಲಸಿಕೆಯನ್ನು ಈಗಾಗಲೇ ಯುರೋಪಿಯನ್ ಯೂನಿಯನ್, ಬ್ರೆಜಿಲ್, ಥೈಲ್ಯಾಂಡ್ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ.
ಭಾರತದ 480 ಜನರಲ್ಲಿ ನಡೆಸಿದ ಮೂರನೇ ಹಂತದ ಪರೀಕ್ಷೆಯಲ್ಲಿ ಈ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ.ಲಸಿಕೆ ಮಾರುಕಟ್ಟೆಗೆ ಬಂದ 6 ತಿಂಗಳೊಳಗೆ ಅದರ ಸುರಕ್ಷತೆಯ ಬಗ್ಗೆ ಭಾರತೀಯ ಜನಸಂಖ್ಯೆಯ ಮೇಲೆ ಮತ್ತಷ್ಟು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕಂಪನಿಗೆ ಸೂಚಿಸಲಾಗಿದೆ.

