ಕೋಲ್ಕತ್ತಾ: ಮತ ಎಣಿಕೆಯ ದಿನವಾದ ಮೇ 4 ಟಿಎಂಸಿಯ 15 ವರ್ಷಗಳ ಸಿಂಡಿಕೇಟ್ ವ್ಯವಸ್ಥೆ ಮತ್ತು ಮಹಾ ಜಂಗಲ್ ರಾಜ್ ಆಡಳಿತದ ಅಂತಿಮ ದಿನವಾಗಲಿದೆ ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಮಥುರಾಪುರ್ ವಿಧಾನಸಭಾ ಕ್ಷೇತ್ರದಲ್ಲಿನ ಕಕ್ಡ್ ವಿಪ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದಲ್ಲಿನ ಬೃಹತ್ ಪ್ರಮಾಣದ ಮತದಾನ ಟಿಎಂಸಿಯ ಭಯದ ಆಡಳಿತವನ್ನು ಬಿಜೆಪಿಯ ಭರವಸೆ ನಿಶ್ಚಿತವಾಗಿ ಪರಾಭವಗೊಳಿಸಲಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಹೇಳಿದರು.
"ಪಶ್ಚಿಮ ಬಂಗಾಳದಲ್ಲಿ ಒಂದು ವರ್ಗವಿದ್ದು, ಅಲ್ಲಿ ಯಾವುದೇ ಲಂಚವಿಲ್ಲದೆ ಕೆಲಸವಾಗುತ್ತದೆ. ಇಲ್ಲಿ ಟಿಎಂಸಿಯ ಸಿಂಡಿಕೇಟ್ ಗಳು ಹಾಗೂ ಮಧ್ಯವರ್ತಿಗಳು ಹಣವನ್ನು ಕಡಿತಗೊಳಿಸುವುದಿಲ್ಲ. ಟಿಎಂಸಿಯ ಈ 15 ವರ್ಷಗಳ ಸಿಂಡಿಕೇಟ್ ವ್ಯವಸ್ಥೆ ಹಾಗೂ ಮಹಾ ಜಂಗಲ್ ರಾಜ್ಯ ಆಡಳಿತ ತನ್ನ ಅಂತಿಮ ದಿನವನ್ನು ಸಮೀಪಿಸಿದ್ದು, ಅದು ಮೇ 4 ಆಗಿದೆ" ಎಂದು ಅವರು ಘೋಷಿಸಿದರು.
ಸುಳ್ಳು ಭರವಸೆಗಳು ಹಾಗೂ ಜನರಿಗೆ ಎಸಗಿರುವ ದ್ರೋಹಕ್ಕೆ ಮಮತಾ ಬ್ಯಾನರ್ಜಿಯ ಆಡಳಿತ ಕಾರಣ ಎಂದು ಆರೋಪಿಸಿದ ಪ್ರಧಾನಿ ಮೋದಿ, ರಾಜ್ಯದ ಆಡಳಿತಾರೂಢ ಪಕ್ಷ ಮುರಿದಿರುವ ಭರವಸೆಗಳನ್ನು ಪಟ್ಟಿ ಮಾಡಿದರು.
"ಭೂಮಾರ್ಗದಿಂದ ಗಂಗಾಸಾಗರ್ ಮೇಳ ನಡೆಯುವ ಸಾಗರ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಗೊಳ್ಳಬೇಕಿದ್ದು, ಜನರು ಈಗಲೂ ದೋಣಿಗಳನ್ನು ಅವಲಂಬಿಸಿದ್ದಾರೆ" ಎಂದು ಅವರು ಆರೋಪಿಸಿದರು.
"ಇದೇ ರೀತಿ ಪ್ರವಾಹವನ್ನು ತಡೆಯಲು ರೂಪಿಸಲಾಗಿರುವ ಘಟಲ್ ಮಾಸ್ಟರ್ ಪ್ಲಾನ್ ಕೂಡಾ ನೆನೆಗುದಿಗೆ ಬಿದ್ದಿದೆ. ಹಾಗೆಯೇ, ಜಿಲ್ಲಾಧಾರಿತ ಆಹಾರ ಪಾರ್ಕ್ ಗಳು ಮತ್ತು ನದಿ ತೀರದ ಕೊರೆತವನ್ನು ತಡೆಯುವ ಯೋಜನೆಗಳು ಇನ್ನೂ ಬೆಳಕು ಕಾಣಬೇಕಿವೆ" ಎಂದೂ ಅವರು ಟೀಕಿಸಿದರು.

