ನವದೆಹಲಿ: ಫಲಿತಾಂಶ ಪ್ರಕಟಗೊಂಡ ಬಳಿಕವೂ ಚುನಾವಣೋತ್ತರ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆಗಳ (ಸಿಎಪಿಎಫ್) 500 ಕಂಪನಿಗಳು ಆಯೋಗದ ಮುಂದಿನ ಆದೇಶದವರೆಗೆ ಪಶ್ಚಿಮ ಬಂಗಾಳದಲ್ಲಿಯೇ ಉಳಿಯಲಿವೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಪ್ರತಿ ಸಿಎಪಿಎಫ್ ಕಂಪನಿಯು 80ರಿಂದ 100 ಸಿಬ್ಬಂದಿಗಳನ್ನು ಒಳಗೊಂಡಿದ್ದು, ಬಂಗಾಳದಲ್ಲಿ ಚುನಾವಣೆಗಾಗಿ ಒಟ್ಟು 2,400 ಕಂಪೆನಿಗಳನ್ನು ನಿಯೋಜಿಸಲಾಗಿದೆ. ಈ ಪೈಕಿ 1,700 ಕಂಪೆನಿಗಳು ಎ.29ರಂದು ಚುನಾವಣೆ ಮುಗಿದ ಬಳಿಕ ರಾಜ್ಯದಿಂದ ನಿರ್ಗಮಿಸಲಿವೆ.
ಶುಕ್ರವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ ಅವರು, ನಾಗರಿಕರು ಯಾವುದೇ ಭಯವಿಲ್ಲದೆ ಮತದಾನ ಮಾಡುವುದನ್ನು ಹಾಗೂ ಚುನಾವಣೆಗಳು ಹಿಂಸೆ, ಬೆದರಿಕೆ, ಪ್ರಚೋದನೆ, ನಕಲಿ ಮತದಾನ, ಮತಗಟ್ಟೆ ಅಕ್ರಮ ವಶ ಮತ್ತು ಸಂಪರ್ಕಕ್ಕೆ ಅಡ್ಡಿಗಳಿಂದ ಮುಕ್ತವಾಗಿರುವುದನ್ನು ಖಚಿತ ಪಡಿಸಿಕೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯವರಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಚುನಾವಣೆಗಳ ನಂತರವೂ 500 ಸಿಎಪಿಎಫ್ ಕಂಪನಿಗಳನ್ನು ಬಂಗಾಳದಲ್ಲಿ ಉಳಿಸಲು ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಪ.ಬಂಗಾಳದಲ್ಲಿ ಮೇ 6ರಂದು ಚುನಾವಣೆಗಳು ಪೂರ್ಣಗೊಳ್ಳುತ್ತವೆಯಾದರೂ ಚುನಾವಣೆಗೆ ನೇರವಾಗಿ ಸಂಬಂಧಿಸಿದ ಯಾವುದೇ ಚುನಾವಣೋತ್ತರ ಹಿಂಸಾಚಾರವು ಚುನಾವಣಾ ಆಯೋಗದೊಂದಿಗೆ ನಂಟು ಹೊಂದಿರುತ್ತದೆ ಎಂದು ಆಯೋಗದ ಅಧಿಕಾರಿಯೋರ್ವರು ತಿಳಿಸಿದರು.
ಗೆದ್ದ ಪಕ್ಷವು ಬಂಗಾಳದಲ್ಲಿ ಸರಕಾರ ರಚಿಸಿದ ಬಳಿಕವೂ ಪಡೆಗಳನ್ನು ಹಿಂದೆಗೆದುಕೊಳ್ಳುವಂತೆ ಅದು ಆಯೋಗ ಅಥವಾ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಬೇಕಾಗುತ್ತದೆ. ಚುನಾವಣೋತ್ತರ ನಿಯೋಜನೆಯು ಚುನಾವಣಾ ಆಯೋಗದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುವುದರಿಂದ ಗೃಹ ಸಚಿವಾಲಯವು ಅನುಮತಿ ನೀಡಲು ಆಯೋಗದೊಂದಿಗೆ ಸಮಾಲೋಚಿಸುವುದು ಅಗತ್ಯವಾಗುತ್ತದೆ.

