ನವದೆಹಲಿ: ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ವಿಫಲವಾದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ಅತ್ಯಗತ್ಯವಾಗಿದ್ದ ಮಸೂದೆಯನ್ನು ತಿರಸ್ಕರಿಸುವುದು, ಅದನ್ನು ಸಂಭ್ರಮಿಸುವುದು ಮತ್ತು ಅದರ ಬಗ್ಗೆ ವಿಜಯದ ಘೋಷಣೆಗಳನ್ನು ಕೂಗುವುದು ನಿಜಕ್ಕೂ ಖಂಡನೀಯ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಅವಕಾಶ ನೀಡಲಿಲ್ಲ. ಆ ಮೂಲಕ ದೇಶದ 70 ಕೋಟಿ ಮಹಿಳೆಯರಿಗೆ ದ್ರೋಹ ಬಗೆದಿದೆ' ಎಂದು ಹೇಳಿದ್ದಾರೆ.
'ವಿರೋಧ ಪಕ್ಷದ ಈ ಸಂಭ್ರಮಾಚರಣೆಯು ದಶಕಗಳಿಂದ ತಮ್ಮ ಹಕ್ಕುಗಳಿಗಾಗಿ ಕಾಯುತ್ತಿರುವ ಪ್ರತಿಯೊಬ್ಬ ಮಹಿಳೆಗೆ ಮಾಡಿದ ಅಪಮಾನವಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇನ್ನೆಷ್ಟು ಬಾರಿ ಮಹಿಳೆಯರಿಗೆ ದ್ರೋಹ ಬಗೆಯುತ್ತವೆ?' ಎಂದು ಅವರು ಪ್ರಶ್ನಿಸಿದ್ದಾರೆ.
'ಮಸೂದೆ ಜಾರಿಗೆ ಅಡ್ಡಿಪಡಿಸಿರುವ ವಿರೋಧ ಪಕ್ಷಗಳು ಪ್ರತಿ ಚುನಾವಣೆಯಲ್ಲಿಯೂ ಮಹಿಳೆಯರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ' ಎಂದು ಹೇಳಿದ್ದಾರೆ.
ಏನಿದು ಮಸೂದೆ:
ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯ ಪ್ರಕಾರ, 2011ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಸಲಾಗುತ್ತದೆ. 2029ರ ಲೋಕಸಭಾ ಚುನಾವಣೆಗೆ ಮೊದಲು ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸಲು ಲೋಕಸಭಾ ಸ್ಥಾನಗಳನ್ನು 543 ರಿಂದ 850ಕ್ಕೆ ಏರಿಸಲಾಗುತ್ತದೆ ಎಂದು ವಿವರಿಸಲಾಗಿತ್ತು.
ಮಹಿಳಾ ಮೀಸಲಾತಿಯನ್ನು ಸ್ವಾಗತಿಸಿದ್ದ ವಿಪಕ್ಷಗಳು, ಕ್ಷೇತ್ರ ಮರುವಿಂಗಡಣೆಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದವು. ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರತ್ಯೇಕವಾಗಿ ಮಂಡಿಸುವಂತೆ ಒತ್ತಾಯಿಸಿದ್ದವು.

