ದಶಕಗಳ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೈಜೋಡಿಸಿವೆ. ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ ಸಹಿ ಹಾಕಿವೆ. ಈ ಮೂಲಕ ಎರಡೂ ದೇಶಗಳ ಬಾಂಧವ್ಯದಲ್ಲಿ ಹೊಸ ಅಧ್ಯಾಯವೊಂದು ಆರಂಭಗೊಂಡಂತಾಗಿದೆ.
ಈ ಒಪ್ಪಂದದ ಅಡಿಯಲ್ಲಿ ನ್ಯೂಜಿಲೆಂಡ್‌ಗೆ ರಫ್ತಾಗುವ ಭಾರತದ ಶೇ 100 ರಷ್ಟು ಉತ್ಪನ್ನಗಳಿಗೆ ಸುಂಕ ಮುಕ್ತ ಪ್ರವೇಶ ಸಿಗಲಿದೆ.
ಭಾರತದ 8,284 ಉತ್ಪನ್ನಗಳು ಸುಂಕವಿಲ್ಲದೆ ನ್ಯೂಜಿಲೆಂಡ್ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಅವುಗಳಲ್ಲಿ ಮುಖ್ಯವಾಗಿ ಸಿದ್ಧ ಉಡುಪು, ಚರ್ಮದ ವಸ್ತುಗಳು, ಪಾದರಕ್ಷೆ, ಆಭರಣ, ಕೈಮಗ್ಗ, ಕರಕುಶಲ ವಸ್ತುಗಳು ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತಿಗೆ ಹೆಚ್ಚಿನ ವೇಗ ಸಿಗಲಿದೆ.
ಭಾರತಕ್ಕೆ ರಫ್ತಾಗುವ ನ್ಯೂಜಿಲೆಂಡ್‌ನ ಉಣ್ಣೆ, ಮರ, ಕಲ್ಲಿದ್ದಲು, ವೈನ್ ಮತ್ತು ಹಣ್ಣುಗಳ ಮೇಲಿನ ಹೆಚ್ಚಿನ ಸುಂಕಗಳಿಗೆ ವಿನಾಯಿತಿ ಸಿಗಲಿದೆ ಅಥವಾ ಕಡಿಮೆಯಾಗಲಿದೆ.
ಡೈರಿ ಉತ್ಪನ್ನಗಳಾದ ಹಾಲು, ಚೀಸ್, ಸೇರಿದಂತೆ ಸಕ್ಕರೆ, ಖಾದ್ಯ ತೈಲ ಮತ್ತು ಈರುಳ್ಳಿಯನ್ನು ಈ ಒಪ್ಪಂದದಿಂದ ಹೊರಗಿಡಲಾಗಿದೆ. ಹೀಗಾಗಿ ಭಾರತದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಈ ಒಪ್ಪಂದವು ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸುಮಾರು 5 ಬಿಲಿಯನ್ ಡಾಲರ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಈ ಒಪ್ಪಂದವುವ ಭಾರತವು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ನಂಬಿಕೆಗೆ ಅರ್ಹವಾಗಿರುವ ಇತರ ದೇಶಗಳೊಂದಿಗೆ ವ್ಯಾಪಾರ ಬೆಳೆಸಲು ಸಹಕಾರಿಯಾಗಿದೆ.
ಉದ್ಯೋಗ-ಶಿಕ್ಷಣಕ್ಕೆ ಅವಕಾಶ
ಪ್ರತಿ ವರ್ಷ ಭಾರತದ 5,000 ನುರಿತ ವೃತ್ತಿಪರರಿಗೆ ನ್ಯೂಜಿಲೆಂಡ್‌ನಲ್ಲಿ ಉದ್ಯೋಗಾವಕಾಶಕ್ಕೆ ವಿಶೇಷ ವೀಸಾ ಸೌಲಭ್ಯ ಸಿಗಲಿದೆ.
ಇದಲ್ಲದೆ, ವಾರ್ಷಿಕವಾಗಿ 1,000 ಯುವಕರಿಗೆ 'ವರ್ಕ್ ಆಯಂಡ್ ಹಾಲಿಡೇ' ವೀಸಾಗಳನ್ನು ನೀಡಲಾಗುತ್ತದೆ. ಇದು ಅಲ್ಲಿ ಪ್ರವಾಸ ಮಾಡುತ್ತಲೇ ಅಲ್ಪಾವಧಿಯ ಕೆಲಸ ಮಾಡಲು ಅವಕಾಶ ನೀಡುತ್ತದೆ.
ಮುಂದಿನ 15 ವರ್ಷದಲ್ಲಿ ಭಾರತದಲ್ಲಿನ ತಯಾರಿಕಾ ವಲಯ, ಸೇವೆ ಮತ್ತು ನಾವೀನ್ಯ ಕ್ಷೇತ್ರ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 20 ಬಿಲಿಯನ್ ಡಾಲರ್ (₹1.88 ಲಕ್ಷ ಕೋಟಿ) ಹೂಡಿಕೆ ಮಾಡಲು ನ್ಯೂಜಿಲೆಂಡ್ ನಿರ್ಧರಿಸಿದೆ. ಈ ಹೂಡಿಕೆಯು ಉತ್ಪಾದನಾ ಕ್ಷೇತ್ರ, ಮೂಲಸೌಕರ್ಯ, ಸ್ಟಾರ್ಟ್‌ಅಪ್‌ಗಳು ಮತ್ತು ನವೀನ ತಂತ್ರಜ್ಞಾನಗಳಲ್ಲಿ ಬಳಕೆಯಾಗಲಿದೆ.
ನ್ಯೂಜಿಲೆಂಡ್‌ನಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳಿಗೆ ವಾರಕ್ಕೆ 20 ಗಂಟೆ ಕೆಲಸ ಮಾಡಲು ಅವಕಾಶ ಮತ್ತು ಪದವಿಯ ನಂತರ 3 ರಿಂದ 4 ವರ್ಷಗಳವರೆಗೆ ಅಲ್ಲಿಯೇ ಉಳಿದು ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ:₹1.88 ಲಕ್ಷ ಕೋಟಿ ಹೂಡಿಕೆ
ಕೃಷಿಗೂ ಲಾಭ
ನ್ಯೂಜಿಲೆಂಡ್‌ನ ಆಧುನಿಕ ಕೃಷಿ ತಂತ್ರಜ್ಞಾನದ ಪರಿಚಯ ಭಾರತಕ್ಕೆ ಆಗಲಿದೆ.
ಭಾರತದಲ್ಲಿ ಸೇಬು, ಕಿವಿ ಹಣ್ಣು ಮತ್ತು ಜೇನುತುಪ್ಪದ ಉತ್ಪಾದನೆಯನ್ನು ಹೆಚ್ಚಿಸಲು 'ಸೆಂಟರ್ ಆಫ್ ಎಕ್ಸಲೆನ್ಸ್' ಕೇಂದ್ರ ಸ್ಥಾಪಿಸಲಾಗುತ್ತಿದೆ. ಇದು ಭಾರತೀಯ ರೈತರ ಆದಾಯವನ್ನು ಹೆಚ್ಚಿಸಲು ಸಹಾಯಕವಾಗಲಿದೆ.
ಕೌಶಲ ಆಧಾರಿತ ಮತ್ತು ಕಾರ್ಮಿಕ ಪ್ರಧಾನ ವಲಯಗಳಲ್ಲಿ ಸ್ಪರ್ಧೆ ಹೆಚ್ಚಾಗುವುದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಲಾಭವಾಗಲಿದ್ದು, ಉದ್ಯೋಗ ಸೃಷ್ಟಿಗೆ ನೆರವಾಗಲಿದೆ.

