ನವದೆಹಲಿ: ಲೋಕಸಭೆಯಲ್ಲಿ ಅಸ್ತಿತ್ವದಲ್ಲಿರುವ ಸಂಖ್ಯಾಬಲದೊಂದಿಗೆ 2029ರಿಂದ ಮಹಿಳಾ ಮೀಸಲು ಕಾನೂನನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ಚರ್ಚಿಸಲು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕು ಎಂದು ಎಂದು ಕಾಂಗ್ರೆಸ್ ಮಂಗಳವಾರ ಪುನರುಚ್ಚರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ ಭಾರತದ ಮಹಿಳೆಯರನ್ನು ಬಳಸಿಕೊಂಡು ಮಾಡಿದ ಪಾಪಗಳನ್ನು ತೊಳೆದುಕೊಳ್ಳುವ ಕಾಲ ಬಂದಿದೆ ಎಂದು ಅದು ಹೇಳಿದೆ.
'ಇದೀಗ ಚುನಾವಣಾ ಪ್ರಚಾರ ಮುಗಿದಿದೆ. ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ತರುವ ಕೇಂದ್ರದ ದುಷ್ಟ ನಡೆಯನ್ನು ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ವಿಫಲಗೊಳಿಸಿವೆ. ಇದೀಗ ಪ್ರಧಾನಿ ಅವರು ವಿರೋಧ ಪಕ್ಷಗಳ ಒತ್ತಾಯವನ್ನು ಕೇಳಬೇಕಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
'ನಾರಿಶಕ್ತಿ ವಂದನಾ ಅಧಿನಿಯಮ-2023 ಅನ್ನು 2029ರಿಂದ ಲೋಕಸಭೆಯಲ್ಲಿ ಹೇಗೆ ಜಾರಿಗೆ ತರಬಹುದು ಎಂಬುದನ್ನು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು. ಅದು ಆಗಲೇಬೇಕಾದ ಅತ್ಯಗತ್ಯ ಕೆಲಸವಾಗಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಕರೆದಿದ್ದ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯು ಮಹಿಳಾ ಮೀಸಲಾತಿ ಮಸೂದೆ ಆಗಿರಲಿಲ್ಲ. ಬದಲಿಗೆ ಅದು ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಕುರಿತ ಕಾರ್ಯಸೂಚಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
-ನರೇಂದ್ರ ಮೋದಿ, ಪ್ರಧಾನಿಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಲು ಕಾಂಗ್ರೆಸ್ ಸಮಾಜವಾದಿ ಪಕ್ಷ ಟಿಎಂಸಿ ಡಿಎಂಕೆ ಕಾರಣ. ಮಹಿಳೆಯರಿಗೆ ಮೀಸಲಾತಿ ಹಕ್ಕು ಜಾರಿಗೆ ಬರುವಂತೆ ನೋಡಿಕೊಳ್ಳಲು ಯಾವುದೇ ಅವಕಾಶವನ್ನೂ ಬಿಡುವುದಿಲ್ಲ.

