ಮುಂಬೈ: ಮುಂಬೈನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಓವರ್ ಡೋಸ್ ಮಾದಕ ದ್ರವ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಕೆಟ್ ಇಲ್ಲದ ಪೆಡ್ಲರ್ ಗಳಿಗೆ ಸಂಗೀತ ಗೋಷ್ಠಿಗೆ ಪ್ರವೇಶಿಸಲು ಅವಕಾಶ ನೀಡಿ, ಅವರು ಮಾದಕ ದ್ರವ್ಯ ಹಂಚಲು ನೆರವಾದ ಬೌನ್ಸರ್ ಒಬ್ಬನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಪ್ರಿಲ್ 11ರಂದು ಮೆಟ್ರೊಪೊಲಿಸ್ ನ ಭಾಗವಾದ ವಾಯುವ್ಯ ಗೋರೆಗಾಂವ್ ನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಮದ್ಯ ಹಾಗೂ ಮತ್ತೇರಿಸುವ ಮಾತ್ರೆಗಳನ್ನು ಸೇವಿಸಿದ ಬಳಿಕ ಓವರ್ ಡೋಸ್ ನಿಂದ ಓರ್ವ ಎಂಬಿಎ ವಿದ್ಯಾರ್ಥಿ ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರಿಬ್ಬರೂ ಎಪ್ರಿಲ್ 12ರಂದು ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿಗೆ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಗೀತ ಗೋಷ್ಠಿಯ ಭದ್ರತಾ ತಂಡದ ಭಾಗವಾಗಿದ್ದ ಪ್ರದೀಪ್ ಅರವಿಂದ್ ಗುಪ್ತ ಎಂಬ ಬೌನ್ಸರ್, ಮಾದಕ ದ್ರವ್ಯದ ಪೆಡ್ಲರ್ ಗಳಾದ ಆಯುಷ್ ಸಾಹಿತ್ಯ ಮತ್ತು ವಿನೀತ್ ಗರ್ಲಾನಿ ಅವರಿಗೆ ಟಿಕೆಟ್ ಇಲ್ಲದಿದ್ದರೂ ಸಂಗೀತ ಗೋಷ್ಠಿ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದ ಎಂದು ವನ್ರಾಯಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
"ಇಬ್ಬರಿಂದಲೂ ತಲಾ 1,000 ರೂ. ಪಡೆದಿದ್ದ ಪ್ರದೀಪ್ ಅರವಿಂದ್ ಗುಪ್ತ, ಅವರಿಗೆ ಒಳಗೆ ಹೋಗಲು ಅವಕಾಶ ನೀಡಿದ್ದ. ಆತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿತರಾಗಿರುವವರ ಸಂಖ್ಯೆ 10ಕ್ಕೆ ತಲುಪಿದೆ. ಉಳಿದ ಒಂಭತ್ತು ಬಂಧಿತರ ಪೈಕಿ ಆರು ಮಂದಿ ಮಾದಕ ದ್ರವ್ಯ ಪೂರೈಕೆದಾರರಾಗಿದ್ದು, ಉಳಿದ ಮೂವರು ಸಂಗೀತ ಗೋಷ್ಠಿಯನ್ನು ಸಂಘಟಿಸಿದ್ದ ಸಂಸ್ಥೆಗೆ ಸೇರಿದವರಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.
ಆಯುಷ್ ಸಾಹಿತ್ಯ, ಪ್ರತೀಕ್ ಪಾಂಡ್ಯ, ರೌನಾಕ್ ಖಂಡೇಲ್ವಾಲ್, ಆನಂದ್ ಪಟೇಲ್, ವಿನೀತ್ ಗರ್ಲಾನಿ, ಶುಭ್ ಅಗರ್ವಾಲ್, ಆಕಾಶ್ ಸನಲ್, ಸನ್ನಿ ಜೈನ್, ಬಾಲಕೃಷ್ಣ ಕುರುಪ್ ಹಾಗೂ ಪ್ರದೀಪ್ ಗುಪ್ತ ಬಂಧಿತ 10 ಮಂದಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಸಂಗೀತ ಗೋಷ್ಠಿಗೆ ಹಾಜರಾಗಿದ್ದ 20-22 ಮಂದಿ ವಿದ್ಯಾರ್ಥಿಗಳ ತಂಡದ ಭಾಗವಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ವನ್ರಾಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

