ಶ್ರೀನಗರ/ನವದೆಹಲಿ: ಭಾರತೀಯನೆಂಬ ಸೋಗಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ದೇಶದಿಂದ ಪರಾರಿಯಾಗಿದ್ದ ಲಷ್ಕರ್-ಎ-ತಯಬಾ(ಎಲ್‌ಇಟಿ) ಭಯೋತ್ಪಾದಕ ಉಮರ್ ಹ್ಯಾರಿಸ್ ಅಲಿಯಾಸ್ 'ಖರ್ಗೋಶ್' ಸೌದಿ ಆರೇಬಿಯಾದಲ್ಲಿ ಇದ್ದಾನೆ ಎಂದು ತಿಳಿದುಬಂದಿದೆ.
ತಾನು ರಾಜಸ್ಥಾನದ ನಿವಾಸಿ ಸಜ್ಜದ್ ಎಂದು ಹೇಳಿಕೊಂಡು ಹ್ಯಾರಿಸ್, ನಕಲಿ ಪಾಸ್‌ಪೊರ್ಟ್ ಪಡೆದಿದ್ದ ಎಂದು ಶ್ರೀನಗರ ಪೊಲೀಸರು ಕೇಂದ್ರ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಪರಿಶೀಲನೆಯ ಹೊರತಾಗಿಯೂ ಹ್ಯಾರಿಸ್ ನಕಲಿ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಾಗಿದ್ದು ಹೇಗೆ ಎಂಬುದರ ಬಗ್ಗೆ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿದ್ದು, ವ್ಯವಸ್ಥೆಯ ಲೋಪದೋಷಗಳ ಕುರಿತು ಕಳವಳ ವ್ಯಕ್ತಪಡಿಸಿವೆ.
ಹ್ಯಾರಿಸ್ ಕರಾಚಿಯವನು ಎಂದು ಹೇಳಿರುವ ಹಿಂದಿನ ತನಿಖಾ ವರದಿಗಳಿಗೆ ವಿರುದ್ಧವಾಗಿ, ಆತ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದವನು ಎಂದು ಈಗ ತಿಳಿದುಬಂದಿದೆ. ಕರಾಚಿಯಲ್ಲಿ ಅವನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆತ ಎಲ್‌ಇಟಿ ಸೇರಿದ್ದನು. ಬಳಿಕ 2012ರಲ್ಲಿ ಆತನನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ.
ಭದ್ರತಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಪದೇ ಪದೇ ಸ್ಥಳ ಬದಲಿಸುತ್ತಿದ್ದ ಕಾರಣ ಹ್ಯಾರಿಸ್‌ಗೆ 'ಖರ್ಗೋಶ್' (ಮೊಲ) ಎಂಬ ಅಡ್ಡ ಹೆಸರು ಇದೆ ಎನ್ನಲಾಗಿದೆ.
ಹ್ಯಾರಿಸ್ ಅನ್ನು ಭಾರತಕ್ಕೆ ಮರಳಿ ಕರೆತರಲು ಮತ್ತು ಕೊಲ್ಲಿ ದೇಶದಿಂದ ಗಡಿಪಾರು ಮಾಡಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

