ಫಿರೋಝಾಬಾದ್: ಉತ್ತರ ಪ್ರದೇಶದ ಫಿರೋಝಾಬಾದ್ ನಲ್ಲಿ ಮಹಿಳಾ ತಹಶೀಲ್ದಾರ್ ಒಬ್ಬರು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಕಿರುಕುಳ ಮತ್ತು ಒತ್ತಡದ ಆರೋಪವನ್ನು ಮಾಡಿದ್ದಾರೆ.
ತುಂಡ್ಲಾ ತಹಶೀಲ್ದಾರ್ ಆಗಿರುವ ರಾಖಿ ಶರ್ಮಾ ಅವರು, ಜಿಲ್ಲಾ ಮ್ಯಾಜಿಸ್ಟ್ರೇಟ್ ರಮೇಶ್ ರಂಜನ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ತಿರುಚುವಂತೆ ಒತ್ತಡ ಹೇರಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಖಿ ಶರ್ಮಾ, ಜಿಲ್ಲಾ ಮ್ಯಾಜಿಸ್ಟ್ರೇಟ್ ರಮೇಶ್ ರಂಜನ್ ಅವರು 1.75 ಲಕ್ಷ ಮೌಲ್ಯದ ಐಫೋನ್ ಮತ್ತು ಐವಾಚ್ ಪಡೆದಿದ್ದಾರೆ ಹಾಗೂ ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಮೇಶ್ ರಂಜನ್ ಮತ್ತು ಅವರ ಕಚೇರಿಯು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ತಿರುಚುವಂತೆ ನನ್ನ ಮೇಲೆ ಒತ್ತಡ ಹೇರಿದೆ. ಡಿಎಂ, ಅವರ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್‌ಡಿ) ಮತ್ತು ಇತರ ಸಿಬ್ಬಂದಿ ತನಿಖಾ ವರದಿಯನ್ನು ನಿರ್ದಿಷ್ಟ ರೀತಿಯಲ್ಲಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ನನಗೆ ಕಿರುಕುಳ ನೀಡಲಾಗಿದೆ. ಕಳೆದ 9 ತಿಂಗಳಿನಿಂದ ಕಿರುಕುಳ ಮುಂದುವರೆದಿದೆ ಎಂದು ಆರೋಪಿಸಿದ್ದಾರೆ.
ಯಾವುದೇ ಕಾರಣವಿಲ್ಲದೆ ನನ್ನ 8 ತಿಂಗಳ ವೇತನವನ್ನು ತಡೆಹಿಡಿಯಲಾಗಿದೆ. ನ್ಯಾಯಾಲಯದ ಆದೇಶದ ನಂತರ ವೇತನವನ್ನು ಬಿಡುಗಡೆ ಮಾಡಲಾಯಿತು. ಆದರೆ ಕಿರುಕುಳ ಮುಂದುವರೆಯಿತು. ಜಿಲ್ಲಾಧಿಕಾರಿಯ ಔSಆ ನನ್ನಿಂದ ಐಫೋನ್ ಬೇಡಿಕೆ ಇಟ್ಟಿದ್ದರು, ಅದನ್ನು ತಾನು ಒದಗಿಸಿದ್ದೆ ಮತ್ತು ಆ ಸಾಧನವನ್ನು ಪ್ರಸ್ತುತ ಜಿಲ್ಲಾಧಿಕಾರಿ ಬಳಸುತ್ತಿದ್ದಾರೆ ಎಂದು ಶರ್ಮಾ ಹೇಳಿಕೊಂಡಿದ್ದಾರೆ.
ತುಂಡ್ಲಾ ತಹಸಿಲ್ದಾರ್ ರಾಖಿ ಶರ್ಮಾ ಗುರುವಾರ ತಡರಾತ್ರಿ ಈ ಕುರಿತ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸಿಎಂ ಆದಿತ್ಯನಾಥ್ ಅವರಿಗೆ ಆಗ್ರಹಿಸಿದ್ದಾರೆ.

