ಲೆಬನಾನ್ ಮೇಲಿನ ದಾಳಿಯನ್ನು ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಖಂಡಿಸಿದ್ದಾರೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ಮಿಯಾ ಮೂಲತಃ ಲೆಬನಾನ್ನವರು.
ಕಣ್ಣೀರಿಡುತ್ತಾ ಮಾತನಾಡಿರುವ ಮಿಯಾ, 'ಇಂದು ಅತ್ಯಂತ ನೋವಿನ ದಿನ. ಇಂತಹ ದಾಳಿಯನ್ನು ಇಷ್ಟು ವರ್ಷಗಳಲ್ಲಿ ನೋಡಿಯೇ ಇಲ್ಲ. ನರಮೇಧ ನಡೆಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಇಂತಹ ಘಟನೆಯನ್ನು ಯಾರೂ ನೋಡಿಲ್ಲ. ಶಾಲೆ, ಆಸ್ಪತ್ರೆ, ಸಾರ್ವಜನಿಕ ಪ್ರದೇಶಗಳು, ಸ್ಮಶಾನಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಅದೂ ಕದನ ವಿರಾಮದ ಅವಧಿಯಲ್ಲಿ ಎಂದಿದ್ದಾರೆ.
ನನ್ನ ತೆರಿಗೆ ಹಣವನ್ನು(ಅಮೆರಿಕದಲ್ಲಿ ಪಾವತಿಸುತ್ತಿರುವುದು) ನನ್ನ ಮಾತೃಭೂಮಿಯನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕೆಂದು ಅರ್ಥವಾಗುತ್ತಿಲ್ಲ. ನನಗೆ ಪದಗಳೇ ಸಿಗುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಳ್ಳುತ್ತಿದ್ದೆ. ಆದರೆ ಈಗ ನಾನೇ ಮಾತನಾಡುತ್ತಿದ್ದೇನೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ನಾವು ಮಂಗಳ ಗ್ರಹಕ್ಕೆ ಜನರನ್ನು ಕಳಿಸಿ ಜೀವ ಸಂಕುಲ ಇರಬಹುದೇನೋ ಎಂದು ಶೋಧ ನಡೆಸುತ್ತಿದ್ದೇವೆ. ಆದರೆ ಭೂಮಿಯ ಮೇಲೆ ಇನ್ನೊಬ್ಬ ಜೀವಿಯನ್ನು ಕೊಲ್ಲಲಾಗುತ್ತಿದೆ. ಇದು ಅನಾಗರಿಕತೆ. ಇದು ನಿಲ್ಲುವುದು ಯಾವಾಗ? ಎಂದು ಮಿಯಾ ಪ್ರಶ್ನಿಸಿದ್ದಾರೆ.
ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಮಧ್ಯಾಹ್ನ ಜನದಟ್ಟಣೆ ಇರುವ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಅಪಾರ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ಐದು ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ ಇಸ್ರೇಲ್ ಮತ್ತು ಲೆಬನಾನ್ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ನಡುವಿನ ಸಂಘರ್ಷದಲ್ಲಿ ಒಂದೇ ದಿನದಲ್ಲಿ ಅಪಾರ ಸಾವು ನೋವು ಸಂಭವಿಸಿರುವುದು ಇದೇ ಮೊದಲು.

