ಬೇತುವಾದಹರಿ: ಪಾಕಿಸ್ತಾನವು ಕೋಲ್ಕತ್ತ ಮೇಲೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಹಾಕಿದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಮಾತನಾಡುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದಾರೆ.
ಭವಿಷ್ಯದಲ್ಲಿ ಭಾರತವು ಪಾಕ್ ನೆಲದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದರೆ, ನಾವು ಕೋಲ್ಕತ್ತದ ಮೇಲೆ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಶನಿವಾರ(ಏ.4) ಹೇಳಿದ್ದರು.
ಪ್ರಧಾನಿ ಮೋದಿ ಅವರು ಚುನಾವಣೆಗಾಗಿ ಬಂಗಾಳವನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಪಾಕಿಸ್ತಾನವು ಕೋಲ್ಕತ್ತದ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದರು ಕೂಡ ಅವರು ಬಾಯಿಬಿಡುವುದಿಲ್ಲ. 'ನಾವು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಅವರು ಏಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೇಶದ ಮೇಲಿನ ಬೆದರಿಕೆಯನ್ನು ನಾವು ಹೇಗೆ ವಿರೋಧಿಸುತ್ತೇವೋ ಹಾಗೆ ಕೋಲ್ಕತ್ತದ ಮೇಲಿನ ದಾಳಿಯ ಹೇಳಿಕೆಯನ್ನು ಕೂಡ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

