ಕೊಚ್ಚಿ: ಪ್ರಮುಖ ಮಲಯಾಳಂ ಸುದ್ದಿ ವಾಹಿನಿ MediaOne TV ತನ್ನ ಫೇಸ್‌ಬುಕ್ ಪುಟವನ್ನು ಭಾರತದಲ್ಲಿ ನಿರ್ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈ ಕ್ರಮವು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿಯ ಪ್ರಕಾರ, "ಮೀಡಿಯಾ ಒನ್ ಟಿವಿ"ಯ ಫೇಸ್‌ಬುಕ್ ಪುಟವನ್ನು ಕಳೆದ ಶುಕ್ರವಾರದಿಂದ ಭಾರತದಲ್ಲಿನ ಬಳಕೆದಾರರಿಗೆ ಕಾಣಿಸದಂತೆ ನಿರ್ಬಂಧಿಸಲಾಗಿದೆ. ಆದರೆ, ಈ ಕ್ರಮಕ್ಕೆ ಕಾರಣವಾದ ಯಾವುದೇ ನಿರ್ದಿಷ್ಟ ವಿಷಯ ಅಥವಾ ಉಲ್ಲಂಘನೆಯನ್ನು ಉಲ್ಲೇಖಿಸಲಾಗಿಲ್ಲ ಎಂದು ಚಾನೆಲ್ ವಾದಿಸಿದೆ.
ಫೇಸ್‌ಬುಕ್ ನ ಮೂಲ ಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ಸ್ ತನ್ನ ನೀತಿಗಳನ್ನು ಉಲ್ಲಂಘಿಸುವ ವಿಷಯಗಳನ್ನು ತೆಗೆದುಹಾಕುವ ಅಥವಾ ಕಾನೂನು ಆದೇಶಗಳ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದರೂ, ಸಂಪೂರ್ಣ ಪುಟವನ್ನೇ ನಿರ್ಬಂಧಿಸುವ ಅಧಿಕಾರ ಇದಕ್ಕಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಚಾನೆಲ್ ಗೆ ಫೇಸ್‌ಬುಕ್ ನೀಡಿದ ಏಕೈಕ ವಿವರಣೆ "ಕಾನೂನು ಜಾರಿ ಸಂಸ್ಥೆಗಳು ಅಥವಾ ಭಾರತ ಒಕ್ಕೂಟದ ವಿನಂತಿಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ" ಎಂಬುದಾಗಿದೆ.
ಈ ಹಿನ್ನೆಲೆಯಲ್ಲಿ, ಕ್ರಮವನ್ನು ರದ್ದುಗೊಳಿಸುವಂತೆ ಮತ್ತು ಸೂಕ್ತ ಪರಿಹಾರ ನೀಡುವಂತೆ ಕೋರಿ ಚಾನೆಲ್ ಹೈಕೋರ್ಟ್‌ಗೆ ಮೊರೆ ಹೋಗಿದೆ.
ಭಾರತದಲ್ಲಿ ಪುಟ ನಿರ್ಬಂಧಿತವಾಗಿದ್ದರೂ, ವಿದೇಶಗಳಲ್ಲಿ ಅದು ಇನ್ನೂ ಲಭ್ಯವಿದ್ದು, ಸುದ್ದಿ ಹಾಗೂ ವೀಡಿಯೊಗಳನ್ನು ಅಪ್‌ಲೋಡ್ ಮಾಡುವಂತಹ ಆಡಳಿತಾತ್ಮಕ ಕಾರ್ಯಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಲಾಗಿದೆ.
ಇದಕ್ಕೂ ಮೊದಲು, ಜನವರಿ 2022ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು "ರಾಷ್ಟ್ರೀಯ ಭದ್ರತಾ ಕಾರಣಗಳು" ಹಾಗೂ ಗೃಹ ಸಚಿವಾಲಯದಿಂದ ಭದ್ರತಾ ಅನುಮತಿ ನಿರಾಕರಣೆಯನ್ನು ಉಲ್ಲೇಖಿಸಿ ಮೀಡಿಯಾ ಒನ್ ಟಿವಿಯ ಪ್ರಸಾರವನ್ನು ನಿಷೇಧಿಸಿತ್ತು.
ಆದರೆ, ಎಪ್ರಿಲ್ 2023ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಆ ನಿಷೇಧವನ್ನು ರದ್ದುಗೊಳಿಸಿತ್ತು. ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಪೂರಕ ಸಾಕ್ಷ್ಯವಿಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಲ್ಲದೆ, ಸರ್ಕಾರದ ನೀತಿಗಳ ಟೀಕೆಯು ಮಾತ್ರದಿಂದ ಚಾನೆಲ್ ಅನ್ನು "ರಾಷ್ಟ್ರವಿರೋಧಿ" ಎಂದು ಕರೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

