ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶದ ಮನೆಯೊಂದರ ಮೇಲೆ ಶಂಕಿತ ಉಗ್ರರು ಮಧ್ಯರಾತ್ರಿ 1 ಗಂಟೆಗೆ ಬಾಂಬ್ ಎಸೆದಿದ್ದಾರೆ.
ಘಟನೆಯಲ್ಲಿ 5 ವರ್ಷದ ಬಾಲಕ, ಆರು ತಿಂಗಳ ಹೆಣ್ಣು ಮಗು ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯನ್ನು ಖಂಡಿಸಿ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೆಟ್ರೋಲ್ ಬಂಕ್ ಬಳಿಯಿದ್ದ ಒಂದು ಟ್ರಕ್, ಎರಡು ತೈಲ ಟ್ಯಾಂಕರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಮೋಯಿರಾಂಗ್ ಪೊಲೀಸ್ ಠಾಣೆಯ ಮುಂದೆ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಪೊಲೀಸ್ ಚೌಕಿಯನ್ನು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಮೋಯಿರಾಂಗ್ ಟ್ರೊಂಗ್ಲಾವೊಬಿ ಪ್ರದೇಶವು ಚುರಾಚಂದ್‌ಪುರದ ಗುಡ್ಡಗಾಡು ಪ್ರದೇಶದ ಸಮೀಪದಲ್ಲಿದೆ. 2023 ಮತ್ತು 2024ರಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಸಂಘರ್ಷದ ವೇಳೆ ಈ ಭಾಗದಲ್ಲಿ ಹಲವು ಬಾರಿ ಗುಂಡಿನ ಚಕಮಕಿ ನಡೆದಿತ್ತು. ಮಂಗಳವಾರ ಕೂಡ ಇದೇ ಪ್ರದೇಶದ ಸಮೀಪ ಮತ್ತೊಂದು ಸ್ಫೋಟಕ ಸಾಧನ ವಶಪಡಿಸಿಕೊಳ್ಳಲಾಗಿದೆ.
ಸ್ಥಳೀಯ ಎನ್‌ಪಿಪಿ ಶಾಸಕ ಥಾ. ಶಾಂತಿ ಸಿಂಗ್ ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ಇದು ಕುಕಿ ಭಯೋತ್ಪಾದಕರು ನಡೆಸಿದ ಕ್ರೂರ ಕೃತ್ಯ. ಇಂತಹ ಅಮಾನವೀಯ ಕೃತ್ಯಗಳಿಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ' ಎಂದು ಅವರು ಕಿಡಿಕಾರಿದ್ದಾರೆ.
ಮೇ 2023ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

