ಕಾಸರಗೋಡು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕಾರ್ಯದಲ್ಲಿ ತಾಯಂದಿರ ಪಾತ್ರ ಮಹತ್ತರವಾದುದು ಎಂದು ಒಡಿಯೂರು ಗುರುದೇವದ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ತಿಳಿಸಿದ್ದಾರೆ. ಅವರು ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನಡೆಯುತ್ತಿರುವ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಮಾತೃಸಂಗಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಮ್ಮ ಮನೆಯನ್ನೇ ದೇವಾಲಯವನ್ನಾಗಿಸುವ, ಬದುಕಿನಲ್ಲಿ ದೇವಾಲಯಗಳನ್ನು ಪ್ರಧಾನ ಕೇಂದ್ರವಾಗಿಸುವ ಕಲೆ ತಾಯಂದಿರಿಗಿದೆ. ಮಮತೆ ಮತ್ತು ನೈತಿಕತೆ ತಾಯಂದಿರ ಮೂಲಶಕ್ತಿಯಾಗಿದ್ದು, ತಾವು ಧಾರ್ಮಿಕವಾಗಿ ತೊಡಗಿಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಯನ್ನೂ ಆ ನಿಟ್ಟಿನಲ್ಲಿ ಸಜ್ಜುಗೊಳಿಸುವ ದೊಡ್ಡ ಹೊಣೆಗಾರಿಕೆಯನ್ನು ಅವರು ಹೊಂದಿದ್ದಾರೆ ಎಂದು ತಿಳಿಸಿದರು.
ಹಿಂದೂ ಐಕ್ಯವೇದಿಕೆಯ ರಾಜ್ಯ ಉಪಾಧ್ಯಕ್ಷೆ ನಿಶಾ ಟೀಚರ್ ಕಣ್ಣೂರು ಧಾರ್ಮಿಕ ಭಾಷಣ ಮಾಡಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ-ರೂಪಕಲಾ ದಂಪತಿಗೆ ಗೌರವಾರ್ಪಣೆ ನಡೆಯಿತು. ಖ್ಯಾತ ನಾಟಿವೈದ್ಯೆ ಯಮುನಾ ಸುಬ್ಬಣ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವದ ಮಾತೃ ಸಮಿತಿ ಅಧ್ಯಕ್ಷೆ ರಾಧಿಕಾ ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮಪಂಚಾಯತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಸ್ಥಾಯೀ ಸಮಿತಿ ಅಧ್ಯಕ್ಷೆ ಪುಷ್ಪಾ ಗೋಪಾಲನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಜಯಶ್ರೀ ನಾಗರಾಜ್, ಶ್ರೀನಾರಾಯಣ ಗುರು ವನಿತಾ ಸಹಕಾರಿ ಸೊಸೈಟಿಯ ಅಧ್ಯಕ್ಷೆ ಸರೋಜಿನಿ ಸುಬ್ಬಣ್ಣ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರೆ ಮೀರಾ ಕಾಮತ್, ಮುಖ್ಯ ಶಿಕ್ಷಕಿ ಯಶೋದಾ ಟೀಚರ್, ನಗರಸಭೆ ಸದಸ್ಯೆ ಶಾರದಾ, ಪುಷ್ಪಲತಾ ಮೊದಲದವರು ಉಪಸ್ಥಿತರಿದ್ದರು.
ಮಾತೃಸಮಿತಿ ಪ್ರದಾನ ಕಾರ್ಯದರ್ಶಿ ದೀಪಾ ರಾಜೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಹರ್ಷಿತಾ ಕಾಳ್ಯಂಗಾಡು ಪ್ರಾಸ್ತಾವಿಕ ಭಾಷಣ ಮಾಡಿದರು. ಜತೆ ಕಾರ್ಯದರ್ಶಿ ಮಮತಾ ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಜ್ಯೋತಿ ಸಂತೋಷ್ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಮಂಜೇಶ್ವರ ಬಾಲಕೃಷ್ಣ ಮಾಸ್ಟರ್ ಅವರ ಶಿಷ್ಯ ವೃಂದದಿಂದ 'ನಾಟ್ಯೋತ್ಸವ' ನಡೆಯಿತು.



