ಫ್ಲಾರಿಡಾ: ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಧ್ವಜ ಹೊಂದಿದ್ದ ಹಡಗನ್ನು ಕ್ಷಿಪಣಿ ವಿಧ್ವಂಸಕ ನೌಕೆ 'ಯುಎಸ್‌ಎಸ್ ರಾಫೆಲ್ ಪೆರಾಲ್ಟಾ' ಯಶಸ್ವಿಯಾಗಿ ತಡೆದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ತಿಳಿಸಿದೆ.
ಏಪ್ರಿಲ್ 24ರಂದು ಈ ಹಡಗು ಇರಾನ್‌ನ ಬಂದರಿನತ್ತ ಸಾಗಲು ಪ್ರಯತ್ನಿಸುತ್ತಿದ್ದಾಗ ಅಮೆರಿಕದ ನೌಕಾಪಡೆ ಅಧಿಕಾರಿಗಳು ಗಮನಿಸಿ, ತಡೆಹಿಡಿದಿದ್ದಾರೆ.
ಹಡಗು ಇರಾನ್ ಬಂದರಿನತ್ತ ಸಾಗುತ್ತಿದ್ದ ಕಾರಣಕ್ಕಾಗಿಯೇ ತಡೆಯಲಾಗಿದ್ದು, ನೌಕಾ ಸಿಬ್ಬಂದಿ ಹಡಗನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮವು ಅಮೆರಿಕ ಕಾರ್ಯತಂತ್ರದ ಭಾಗವಾಗಿದೆ. ಇರಾನ್ ವಿರುದ್ಧ ಕಟ್ಟುನಿಟ್ಟಾದ ಸಮುದ್ರ ದಿಗ್ಬಂಧನವನ್ನು ಅಮೆರಿಕ ಮುಂದುವರಿಸಲಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿ ಜನರಲ್ ಡಾನ್ ಕೈನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಾವು ಸನ್ನದ್ಧರಾಗಿದ್ದೇವೆ. ಇರಾನ್ ಬಂದರುಗಳಿಗೆ ಹೋಗುವ ಮತ್ತು ಬರುವ ಎಲ್ಲಾ ವಾಣಿಜ್ಯ ಹಡಗುಗಳ ಮೇಲೆ ದಿಗ್ಬಂಧನ ಹೇರುತ್ತೇವೆ ಎಂದು ಕೈನ್ ವಿವರಿಸಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆಯ ಬೆಂಬಲದೊಂದಿಗೆ ಏಪ್ರಿಲ್ 8ರಿಂದ ಜಾಗತಿಕವಾಗಿ ನಿರ್ಬಂಧಿತ ಮತ್ತು ಗುಪ್ತ ನೌಕೆಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಅಮೆರಿಕ ಸೇನೆಗೆ ಆದೇಶ ನೀಡಲಾಗಿದೆ. ಶುಕ್ರವಾರ ಬೆಳಿಗ್ಗೆಯವರೆಗೆ ಒಟ್ಟು 34 ಹಡಗುಗಳು ಅಮೆರಿಕದಿಂದ ದಿಗ್ಬಂಧನ ಎದುರಿಸಿವೆ ಎಂದು ಕೈನ್ ಹೇಳಿದ್ದಾರೆ.

