ಅಮೆರಿಕ ವ್ಯಾಪಾರ ಪ್ರತಿನಿಧಿ ಕಚೇರಿಯು ಬಿಡುಗಡೆಗೊಳಿಸಿರುವ 'ವಿದೇಶಿ ವ್ಯಾಪಾರ ಅಡೆತಡೆಗಳ ಕುರಿತು 202ರ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿ'ಯು ಹಲವಾರು ದೇಶಗಳಲ್ಲಿ ಅಮೆರಿಕದ ರಫ್ತುಗಳು,ವಿದೇಶಿ ನೇರ ಹೂಡಿಕೆ ಮತ್ತು ವಿದ್ಯುನ್ಮಾನ ವಾಣಿಜ್ಯಕ್ಕೆ ಗಮನಾರ್ಹ ವಿದೇಶಿ ಅಡೆತಡೆಗಳನ್ನು ಎತ್ತಿ ತೋರಿಸಿದೆ.
ಭಾರತ ಸರಕಾರವು ಫೆ.2021ರಲ್ಲಿ ಜಾರಿಗೆ ತಂದ ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಗಳ ಕುರಿತು ವರದಿಯು ಆತಂಕವನ್ನು ವ್ಯಕ್ತಪಡಿಸಿದೆ.
ಈ ಐಟಿ ನಿಯಮಗಳು ಸಾಮಾಜಿಕ ಮಾಧ್ಯಮ, ಸ್ಟ್ರೀಮಿಂಗ್ (ಒಟಿಟಿ) ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುತ್ತವೆ.
ಐಟಿ ನಿಯಮಗಳು ಹಲವಾರು ಅಗತ್ಯಗಳನ್ನು ವಿಧಿಸಿದ್ದು,ಇವುಗಳ ಬಗ್ಗೆ ಅಮೆರಿಕನ್ ಕಂಪನಿಗಳು ಕಳವಳಗಳನ್ನು ವ್ಯಕ್ತಪಡಿಸಿವೆ ಎಂದು ತಿಳಿಸಿರುವ ವರದಿಯು, ಉದಾಹರಣೆಗೆ ಕಂಪನಿಯೊಂದು ನಿಯಮಗಳನ್ನು ಪಾಲಿಸದಿದ್ದರೆ ಅದರ ಉದ್ಯೋಗಿಗಳ ಮೇಲೆಯೇ ವೈಯಕ್ತಿಕ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊರಿಸುತ್ತವೆ. ಜೊತೆಗೆ ಈ ನಿಯಮಗಳು ವಿಧಿಸುವ ಕಠಿಣ ಪಾಲನಾ ಗಡುವುಗಳು ಮತ್ತು ಟೇಕ್‌ಡೌನ್ ಶಿಷ್ಟಾಚಾರಗಳನ್ನು ಅನುಸರಿಸುವುದು ಕಷ್ಟಕರವಾಗಿದೆ ಎಂದೂ ಹೆಳಿದೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಕಂಟೆಂಟ್‌ಗಳನ್ನು ತೆಗೆದುಹಾಕುವಂತೆ ಸೂಚಿಸಬಹುದಾದ ಅಧಿಕಾರಿಗಳನ್ನು ವ್ಯಾಖ್ಯಾನಿಸಲು ಭಾರತ ಸರಕಾರವು ಅ.2025ರಲ್ಲಿ ಐಟಿ ನಿಯಮಗಳಿಗೆ ತಿದ್ದುಪಡಿಯನ್ನು ತಂದಿದೆ. ನ್ಯಾಯಾಲಯದ ಆದೇಶ ಅಥವಾ ಜಂಟಿ ಕಾರ್ಯದರ್ಶಿ/ನಿರ್ದೇಶಕ ಮಟ್ಟದ ಸರಕಾರಿ ಅಧಿಕಾರಿಯ ಸೂಚನೆಯ ಮೇರೆಗೆ ಆದೇಶದ ಮೂಲಕ ಮಾತ್ರ ಕಂಟೆಂಟ್‌ನ್ನು ತೆಗೆದುಹಾಕುವಂತೆ ಅಥವಾ ಪ್ರವೇಶವನ್ನು ನಿರ್ಬಂಧಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಬಹುದು. ಟೇಕ್‌ಡೌನ್ ನೋಟಿಸ್ ಪೋಲಿಸರಿಂದ ಬಂದಿದ್ದರೆ ಅದು ಡಿಐಜಿ ಮಟ್ಟದ ಅಧಿಕಾರಿಯಿಂದ ಬರಬೇಕು ಮತ್ತು ಲಿಖಿತ ಕಾರಣಗಳನ್ನು ಹೊಂದಿರಬೇಕು.
ಭಾರತ ಸರಕಾರವು ನ.2025ರಲ್ಲಿ ತಂದಿರುವ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು ವೈಯಕ್ತಿಕ ಡೇಟಾ ಸಂಗ್ರಹಣೆ ಮತ್ತು ಬಳಕೆಯನ್ನು ನಿಯಂತ್ರಿಸುತ್ತವೆ, ಸರಕಾರದೊಂದಿಗೆ ಡೇಟಾ ಹಂಚಿಕೊಳ್ಳುವುದನ್ನು ಕಂಪನಿಗಳಿಗೆ ಕಡ್ಡಾಯಗೊಳಿಸುತ್ತವೆ ಮತ್ತು ನಿರ್ದಿಷ್ಟ ದೇಶಕ್ಕೆ ಡೇಟಾ ವರ್ಗವಣೆಯನ್ನು ನಿರ್ಬಂಧಿಸಲು ಅವಕಾಶ ನೀಡುತ್ತವೆ ಎಂದು ವರದಿಯು ಬೆಟ್ಟುಮಾಡಿದೆ.
ಭಾರತ ಸರಕಾರವು ಇಂಟರ್ನೆಟ್ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ವರದಿಯು ಹೊರಬಿದ್ದಿದೆ.
ಹೊಸ ಕರಡು ತಿದ್ದುಪಡಿಯ ಪ್ರಕಾರ ಸ್ವತಂತ್ರ ಸುದ್ದಿ ಸೃಷ್ಟಿಕರ್ತರ ವಿರುದ್ಧವೂ ಟೇಕ್‌ಡೌನ್ ಕ್ರಮವನ್ನು ತೆಗೆದುಕೊಳ್ಳಬಹುದು,ವಿಷಯನ್ನು ತಿದ್ದುಪಡಿ ಮಾಡುವಂತೆ ಅಥವಾ ಕ್ಷಮೆ ಕೇಳುವಂತೆ ಮಾಡಬಹುದು.
ಭಾರತದಲ್ಲಿ ಡಿಜಿಟಲ್ ನಿಯಮಗಳು ಮತ್ತು ಟೇಕ್‌ಡೌನ್ ಕ್ರಮಗಳು ಹೆಚ್ಚುತ್ತಿರುವುದರಿಂದ ಇದು ಅಮೆರಿಕದ ಕಂಪನಿಗಳಿಗೆ ವ್ಯಾಪಾರ ಮತ್ತು ಸ್ವಾತಂತ್ರ್ಯದ ದೃಷ್ಟಿಯಿಂದ ಸವಾಲಾಗಿದೆ ಎಂದು ವರದಿಯು ತೀರ್ಮಾನಿಸಿದೆ.

