ನವದೆಹಲಿ :ಚೀನೀ ವೀಡಿಯೋ ಕಣ್ಗಾವಲು ದೈತ್ಯ ಕಂಪೆನಿಗಳಾದ ಹೈಕ್ವಿಷನ್ ಮತ್ತು ದಹುವಾಗೆ ಭಾರತದಲ್ಲಿ ಇಂಟರ್ನೆಟ್ ಸಂಪರ್ಕಿತ ಸಿಸಿಟಿವಿ ಕ್ಯಾಮರಾಗಳನ್ನು ಮಾರುವುದಕ್ಕೆ ನಿಷೇಧ ವಿಧಿಸಲಾಗಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವ ಹೊಸ ಪ್ರಮಾಣೀಕರಣ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣೀಕರಣ (STQC) ನಿಯಮಗಳ ಅಡಿಯಲ್ಲಿ, ಚೀನೀ ಚಿಪ್ ಸೆಟ್ ಗಳ ಅಡಿಯಲ್ಲಿ ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಪ್ರಮಾಣೀಕರಣ ನೀಡಲು ಸರ್ಕಾರ ನಿರಾಕರಿಸಿದೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಸಿಸಿಟಿವಿ ಮಾರುಕಟ್ಟೆಯಿಂದ ಚೀನಾದ ಬ್ರಾಂಡ್ಗಳನ್ನು ಹೊರಗಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉದ್ಯಮ ಕಾರ್ಯನಿರ್ವಾಹಕರು ಅಭಿಪ್ರಾಯಪಟ್ಟಿದ್ದಾರೆ.
ಮೊದಲಿನಿಂದಲೇ ಸಿಸಿಟಿವಿ ಕ್ಯಾಮರಾ ಉದ್ಯಮದಲ್ಲಿ ಚೀನಾದ ಬ್ರಾಂಡ್ ಗಳದ್ದೇ ಕಾರುಬಾರು ಇದ್ದು, ಮೂರನೇ ಒಂದರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದವು. ಇದೀಗ ತೈವಾನೀಸ್ ಚಿಪ್ ಸೆಟ್ ಗಳು ಮತ್ತು ಸ್ಥಳೀಯ ಫರ್ಮ್ವೇರ್ ಗಳಿಗೆ ಬದಲಾಗಿರುವ ಸಿಪಿ ಪ್ಲಸ್, ಕ್ಯುಬೊ, ಪ್ರಾಮಾ, ಮ್ಯಾಟ್ರಿಕ್ಸ್ ಮತ್ತು ಸ್ಪಾರ್ಷ್ನಂತಹ ದೇಸಿ ಬ್ರಾಂಡ್ ಗಳಿಗೆ ಅವಕಾಶ ದೊರೆತಿದೆ.
ಫೆಬ್ರವರಿಯಲ್ಲಿ ಭಾರತೀಯ ಕಂಪೆನಿಗಳು ಶೇ 80ರಷ್ಟು ಮಾರುಕಟ್ಟೆಯ ಮೇಲೆ ನಿಯಂತ್ರಣ ಹೊಂದಿವೆ. ಸಿಪಿ ಪ್ಲಸ್ ಮಾತ್ರವೇ ಶೇ 45-50ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಮೊದಲು ಚೀನಾ ಕಂಪೆನಿಗಳ ನಡುವೆ ಸಿಪಿ ಪ್ಲಸ್ ಗೆ ಶೇ 20-25ರಷ್ಟು ಮಾರುಕಟ್ಟೆ ಪಾಲು ಮಾತ್ರ ಇತ್ತು.
►ಏರುತ್ತಿರುವ ಜಾಗತಿಕ ಕಂಪೆನಿಗಳ ಸ್ಪರ್ಧೆ
ಭಾರತೀಯ ಬ್ರ್ಯಾಂಡ್ ಗಳು ಮುಖ್ಯ ವಾಹಿನಿಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರೆ, ಬಾಷ್ ಮತ್ತು ಹನಿವಲ್ ಕಂಪೆನಿಗಳು ಉನ್ನತ ಮಟ್ಟದ ಸಿಸಿಕ್ಯಾಮರಾ ವಿಭಾಗಗಳಲ್ಲಿ ಪ್ರಾಬಲ್ಯ ಪಡೆದಿವೆ. ಒಂದು ಕಾಲದಲ್ಲಿ ಸ್ಮಾರ್ಟ್ ಹೋಮ್ ಕ್ಯಾಮರಾಗಳನ್ನು ಮಾರಾಟ ಮಾಡುತ್ತಿದ್ದ ಶಿಯೋಮಿ ಮತ್ತು ರಿಯಲ್ ಮಿ ಯಂತಹ ಸಣ್ಣ ವ್ಯಾಪಾರಿಗಳು ಹಾಗೂ ಸ್ಮಾರ್ಟ್ಫೋನ್ ಬ್ರಾಂಡ್ ಗಳು ಪ್ರಮಾಣೀಕರಣ ಪಡೆಯಲು ವಿಫಲವಾದ ನಂತರ ಮಾರುಕಟ್ಟೆಯಿಂದ ನಿರ್ಗಮಿಸಿವೆ. ತಿಂಗಳಿಗೆ ಎರಡು ಮಿಲಿಯನ್ ಕ್ಯಾಮರಾಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಹೈಕ್ವಿಷನ್ ಗೆ ಪ್ರಮಾಣೀಕರಣ ನಿರಾಕರಿಸಲಾಗಿದೆ.
ಚೀನಾದ ಕಂಪೆನಿಗಳು ಮಾರುಕಟ್ಟೆಯಲ್ಲಿ ಉಳಿದುಕೊಳ್ಳಬೇಕಾದರೆ ಭಾರತೀಯ ಕಂಪೆನಿಗಳ ಜೊತೆಗೆ ಜಂಟಿ ಉದ್ಯಮಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ ದಹುವಾ ಹೆಚ್ಚು ಬಳಕೆಯಲ್ಲಿಲ್ಲದ ಅನಾಲಾಗ್ ಕ್ಯಾಮರಾಗಳ ಮಾರಾಟಕ್ಕೆ ಸೀಮಿತವಾಗಿದೆ.
ಚೀನೀ ಪೂರೈಕೆದಾರರಿಂದ ದೂರ ಸರಿದಿರುವ ಕಾರಣ ವೆಚ್ಚ ಹೆಚ್ಚಾಗಿದೆ. ವಿಶ್ಲೇಷಕರು ವಸ್ತುಗಳ ಬಿಲ್ನಲ್ಲಿ ಶೇ 15-20ರಷ್ಟು ಹೆಚ್ಚಳವಾಗಬಹುದು ಎಂದು ಅಂದಾಜಿಸಿದ್ದಾರೆ. ವಿಶೇಷವಾಗಿ ಮಧ್ಯಮ ಮತ್ತು ಉನ್ನತ ಮಟ್ಟದ ಮಾದರಿಗಳಲ್ಲಿ ತೈವಾನೀಸ್ ಮತ್ತು ಅಮೆರಿಕದ ಚಿಪ್ ಸೆಟ್ ಗಳು ಚೀನೀ ಚಿಪ್ ಸೆಟ್ ಗಳಿಗಿಂತ ದುಬಾರಿಯಾಗಿವೆ. ಸ್ಥಳೀಯ ಉತ್ಪಾದನೆಯಿಂದ ಹೈಎಂಡ್ ಅಲ್ಲದ ಸಿಸಿಟಿವಿ ಕ್ಯಾಮರಾಗಳ ವೆಚ್ಚ ಸ್ಥಿರವಾಗಿದ್ದರೂ, ಪ್ರೀಮಿಯಂ ವಿಭಾಗದಲ್ಲಿ ತೀವ್ರ ಬೆಲೆ ಏರಿಕೆಯಾಗಿದೆ.
ಭಾರತದ ಮಟ್ಟಿಗೆ ಏನು ಬದಲಾವಣೆ?
ಒಂದು ಕಾಲದಲ್ಲಿ ಚೀನೀ ಬ್ರಾಂಡ್ಗಳಿಂದ ನಿಯಂತ್ರಿತವಾಗಿದ್ದ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಅವಕಾಶ ದೊರೆತಿದೆ. ಇದು ಡಿಜಿಟಲ್ ಭದ್ರತೆ ಮತ್ತು ಪೂರೈಕೆ ಸರಪಳಿ ಸ್ವಾಯತ್ತತೆಗಾಗಿ ಭಾರತದ ವಿಶಾಲ ಪ್ರಯತ್ನದ ಭಾಗವಾಗಿದೆ. ಆದರೆ ಅಧಿಕ ವೆಚ್ಚದಿಂದ ಜನಸಾಮಾನ್ಯರ ಬಳಕೆ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಪ್ರಮಾಣೀಕೃತ ವ್ಯವಸ್ಥೆಗಳಿಗೆ ಅಪ್ಗ್ರೇಡ್ ಆಗುವುದು ವ್ಯಾಪಾರಿಗಳು ಮತ್ತು ಕಂಪೆನಿಗಳಿಗೆ ಸವಾಲಾಗಬಹುದು.

