ಲಕ್ನೋ: ಉತ್ತರ ಪ್ರದೇಶದ ಬಹರೀಚ್ ಕ್ಷೇತ್ರದ ಬಿಜೆಪಿ ಶಾಸಕಿ ಶನಿವಾರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರತಿಕೃತಿಗೆ ಬೆಂಕಿ ಹಚ್ಚುವ ಯತ್ನದಲ್ಲಿದ್ದಾಗ ಬೆಂಕಿ ತಗುಲಿ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಪ್ರಕರಣ ವರದಿಯಾಗಿದೆ.
ಮಹಿಳಾ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದೆ.
ಸುಟ್ಟಗಾಯಗಳಾದ ಶಾಸಕಿ ಅನುಪಮ ಜೈಸ್ವಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಲಕ್ನೋಗೆ ಕರೆದೊಯ್ಯಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
"ಶಾಸಕಿಯ ಮುಖಕ್ಕೆ ಬೆಂಕಿ ಹತ್ತಿಕೊಂಡಿದ್ದು, ಹಣೆಯ ಶೇಕಡ ನಾಲ್ಕರಷ್ಟು ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಅವರ ತಲೆಗೂದಲು ಕೂಡಾ ಸುಟ್ಟು ಕರಕಲಾಗಿದೆ. ಆದರೆ ಕಣ್ಣಿಗೆ ಯಾವುದೇ ಅಪಾಯವಾಗಿಲ್ಲ. ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಂ.ಎಂ.ತ್ರಿಪಾಠಿ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರು ಈ ಘಟನೆಯ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಬೆಂಕಿ ಹಚ್ಚುವವರು ಎಚ್ಚರ ವಹಿಸಿ, ಬೆಂಕಿ ಹಚ್ಚುವ ಮಹಿಳೆಯರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು" ಎಂದು ಅಣಕವಾಡಿದ್ದಾರೆ.
ಮಹಿಳಾ ಜನಾಕ್ರೋಶ ಪಾದಯಾತ್ರೆಯಡಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂಜೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನಿವಾಸದ ಮುಂದೆ ಈ ಘಟನೆ ನಡೆದಿದ್ದು, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿಯವರ ಪ್ರತಿಕೃತಿ ದಹಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

