ಕೋಲ್ಕತ್ತ: ಪಶ್ಚಿಮ ಬಂಗಾಳದ ಚುನಾವಣೆಯ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ ನಾಯಕ ಸೇರಿದಂತೆ ಏಳು ಜನರನ್ನು ಎನ್‌ಐಎ ಭಾನುವಾರ ವಶಕ್ಕೆ ಪಡೆದಿದೆ. ಜತೆಗೆ, ಐಎಸ್‌ಎಫ್ ಸದಸ್ಯನಾಗಿರುವ ಪಂಚಾಯತ್ ಸದಸ್ಯನ್ನು ಬಂಧಿಸಿದೆ.
ಎಸ್‌ಐಆರ್ ಪ‍್ರಕ್ರಿಯೆಯಿಂದ ಹೆಸರುಗಳನ್ನು ಅಳಿಸಿಹಾಕಿದ್ದನ್ನು ಪ್ರತಿಭಟಿಸಿ ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಸ್ಥಳೀಯರು ಘೇರಾವ್ ಹಾಕಿದ್ದರು.
ಪ್ರಕರಣದ ತನಿಖೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊಥಾಬಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಯೇಮ್ ಚೌಧರಿ ಅವರನ್ನು ಅಲಿನಗರ ಪಂಚಾಯತ್ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಅವರ ಕೆಲವು ಆಪ್ತರೊಂದಿಗೆ ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಜ್ಯ ಪೊಲೀಸರು ಈ ಹಿಂದೆ ಬಂಧಿಸಿದ್ದ ಎಐಎಂಐಎಂ ಸದಸ್ಯ ಮೊಫಕ್ಕರುಲ್ ಇಸ್ಲಾಂ ಅವರು ವಿಚಾರಣೆ ವೇಳೆ ನೀಡಿದ್ದ ಸುಳಿವುಗಳ ಆಧಾರದ ಮೇಲೆ ಐಎಸ್‌ಎಫ್‌ನ ಗ್ರಾಮ ಪಂಚಾಯತ್ ಸದಸ್ಯ ಗುಲಾಮ್ ರಬ್ಬಾನಿ ಅವರನ್ನು ಬಂಧಿಸಲಾಗಿದೆ' ಎಂದು ಅಧಿಕಾರಿ ಹೇಳಿದ್ದಾರೆ.
ಘೇರಾವ್ ಘಟನೆಯು ಏಪ್ರಿಲ್ 1ರಂದು ನಡೆದಿತ್ತು. ಸುಪ್ರೀಂ ಕೋರ್ಟ್‌ನ ನಿರ್ದೇಶದನ ಮೇರೆಗೆ ಚುನಾವಣಾ ಆಯೋಗವು ತನಿಖೆಯನ್ನು ಎನ್‌ಐಎಗೆ ವಹಿಸಿದೆ.

