ಬದಿಯಡ್ಕ: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಏಕಪಕ್ಷದ ಅಭ್ಯರ್ಥಿಗಳೇ ನಿರಂತರ ಆಯ್ಕೆಯಾಗುತ್ತಿರುವುದು ಇಲ್ಲಿಯ ಮೂಲ ಸೌಕರ್ಯ ಸಹಿತ ಇತರ ಹಿನ್ನಡೆಗೆ ಮುಖ್ಯ ಕಾರಣ ಎಂದು ಎನ್.ಡಿ.ಎ. ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಿನಿ ಎಂ.ಎಲ್.ಅವರು ಸೋಮವಾರ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ತಿಳಿಸಿದರು.
ಭರವಸೆಗಳೊಂದಿಗೆ ಶಂಕುಸ್ಥಾಪನೆಗೊಂಡ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು-ಆಸ್ಪತ್ರೆ ಕಳೆದ 13 ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಅರ್ಧದಲ್ಲೇ ಮೊಟಕುಗೊಂಡಿದೆ. ಇಲ್ಲಿಯ ಅಸಂಖ್ಯ ಎಂಡೋಸಲ್ಫಾನ್ ದುರಿತ ಬಾಧಿತ ಸಂತ್ರಸ್ಥರು ಕೇವಲ 5 ಲಕ್ಷ ಮೊತ್ತದೊಂದಿಗೆ ಇನ್ನೂ ಏದುಸಿರು ಬಿಡುತ್ತಿದ್ದು, ಜೀವ ಪರ್ಯಂತದ ನೆರವಿಗಾಗಿ ಗತಿಯಿಲ್ಲದೆ ತೊಳಲುತ್ತಿದ್ದಾರೆ. ಚೆರ್ಕಳ-ಕಲ್ಲಡ್ಕ ರಾಜ್ಯ ಹೆದಾರಿಯ ಸ್ಥಿತಿ ಅಧೋಗತಿಯಲ್ಲಿದ್ದು, ಕಳೆದ 10 ವರ್ಷಗಳಿಂದ ಭಾರೀ ವಿವಾದಕ್ಕೊಳಗಾಗಿದೆ. ಗ್ರಾಮೀಣ ಸಂಪರ್ಕ ವ್ಯವಸ್ಥೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಗಳಾಗಲಿ, ಇತರ ತಳಮಟ್ಟದ ಚಿಕಿತ್ಸಾ ಸೌಕರ್ಯಗಳು ಕನಸಿನ ಭರವಸೆಗಳಾಗಿ ಜನಸಾಮಾನ್ಯರನ್ನು ಹೈರಾಣಗೊಳಿಸಿದೆ. ಯುವ ತಲೆಮಾರಿಗೆ ವಿದ್ಯಾಭ್ಯಾಸ, ಉದ್ಯೋಗ, ಕ್ರೀಡೆ ಸಹಿತ ಇತರ ಅಗತ್ಯ ಸೌಕರ್ಯಗಳ ಕೊರತೆಯಿಂದ ಪ್ರತಿಭಾ ಪಲಾಯನಕ್ಕೆ ಇಲ್ಲಿಯ ಈವರೆಗಿನ ಶಾಸಕರು, ಜನಪ್ರತಿನಿಧಿಗಳು ಕಾರಣರಾಗಿದ್ದಾರೆ.
ಈ ನಿಟ್ಟಿನಲ್ಲಿ ಈ ಎಲ್ಲಾ ಸವಾಲುಗಳಿಗೆ ಪರಿಹಾರವಾಗಿ ಎನ್.ಡಿ.ಎ. ಪ್ರತಿನಿಧಿಸುವ ಅಭ್ಯರ್ಥಿಯಾಗಿ ತಾನು ಗೆದ್ದುಬಂದಲ್ಲಿ ನ್ಯಾಯಯುತ ಪರಿಹಾರ ಕಲ್ಪಿಸುವುದಾಗಿ ಅವರು ಈ ಸಂದರ್ಭ ಹೇಳಿಕೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಅವರು, ಇಲ್ಲಿಯ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ, ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಮೇಲಿನ ಭಾಷಾ ತಾರಮ್ಯ, ಅವಗಣನೆ ಪರಿಹರಿಸಲು ಕನ್ನಡಿಗರೊಂದಿಗೆ ಬಿಜೆಪಿ ಮುಂಚೂಣಿಯಲ್ಲಿರುವುದಾಗಿ ಭರವಸೆ ನೀಡಿದರು.
ಮಂಡಲಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಇತರ ಪ್ರತಿನಿಧಿಗಳಾದ ಸುಕುಮಾರ ಕುದ್ರೆಪ್ಪಾಡಿ, ವಿದುಷಿಃ ಅಶ್ವಿನಿ ಮೊಳೆಯಾರ, ಗಂಗಾಧರ ತೆಕ್ಕೆಮೂಲೆ, ಮಹೇಶ್ ವಳಕ್ಕುಂಜ ಮತ್ತಿತರರು ಉಪಸ್ಥಿತರಿದ್ದರು.



