ಕಾಸರಗೋಡು: ವಿಧಾನಸಭಾ ಚುನಾವಣೆಯ ಬಹಿರಂಗಪ್ರಚಾರಕ್ಕೆ ಏ. 7ರಂದು ಸಂಜೆ ತೆರೆಬೀಳಲಿದ್ದು, ಮುಂದಿನ 48ತಾಸುಗಳ ಕಾಲ ಮನೆ ಸಂದರ್ಶನ ಸೇರಿದಂತೆ ಸಾಮಾನ್ಯ ಪ್ರಚಾರ ಕಾರ್ಯಕ್ಕೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಜ್ಜಾಗಲಿದ್ದಾರೆ. ಕೇರಳದ 140ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಎಡರಂಗ, ಕಾಂಗ್ರೆಸ್ ನೇತೃಥ್ವದ ಐಕ್ಯರಂಗ ಹಾಗೂ ಬಿಜೆಪಿ ನತೃತ್ವದ ಎನ್‍ಡಿಎ ಒಕ್ಕೂಟ ಪ್ರಮುಖವಗಿ ಸೆಣಸಾಡಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 99ಸೀಟುಗಳನ್ನು ಪಡೆದು ಎಡರಂಗ ಸರ್ಕಾರ ರಚಿಸಿದ್ದರೆ, ಐಕ್ಯರಂಗಕ್ಕೆ 41ಸೀಟು ಲಭಿಸಿತ್ತು.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರಸಕ್ತ ಮೂರರಲ್ಲಿ ಎಡರಂಗ ಹಾಗೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಸದಸ್ಯರಿದ್ದಾರೆ.
ಮಂಜೇಶ್ವರ, ಕಾಸರಗೋಡು, ಉದುಮ, ಹೊಸದುರ್ಗ, ತ್ರಿಕ್ಕರಿಪುರ ಕ್ಷೇತ್ರಗಳಲ್ಲಿ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಮುಸ್ಲಿಂಲೀಗ್ ಸದಸ್ಯರಿದ್ದರೆ, ಹೊಸದುರ್ಗದಲ್ಲಿ ಸಿಪಿಐ ಹಾಗೂ ಉದುಮ, ತ್ರಿಕ್ಕರಿಪುರದಲ್ಲಿ ಸಿಪಿಐ(ಎಂ)ಸದಸ್ಯರಿದ್ದಾರೆ.
ಎಂಟು ಪಂಚಾಯಿತಿಗಳನ್ನೊಳಗೊಂಡ ಮಂಜೇಶ್ವರ ಕೇರಳದ ಅತ್ಯುತ್ತರದ ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಮಂಜೇಶ್ವರ ಕ್ಷೇತ್ರದಲ್ಲಿ ಹಾಲಿ ಶಾಸಕ ಎ.ಕೆ.ಎಂ ಅಶ್ರಫ್ ಸಮೀಪ ಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು 745ಮತಗಳ ಅಂತರದಿಂದ ಪರಾಭವಗೊಳಿಸಿದ್ದರೆ, ಈ ಬಾರಿ ಮೂರೂ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ.
ಕನ್ನಡ ಹೋರಾಟ ಸಮಿತಿ ಮೂಲಕ ಸದಸ್ಯರನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳುಹಿಸಿಕೊಟ್ಟ ಹೆಗ್ಗಳಿಕೆ ಮಂಜೇಶ್ವರಕ್ಕಿದೆ. 1957ರಲ್ಲಿ ಎಂ. ಉಮೇಶ ರಾವ್, 1962ರಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ, 1070ರಲ್ಲಿ ಎಂ. ರಾಮಪ್ಪ, 1980ರಲ್ಲಿ ಡಾ. ಎ. ಸುಬ್ಬರಾವ್, 1987ರಿಂದ ಚೆರ್ಕಳಂ ಅಬ್ದುಲ್ಲ ಇಲ್ಲಿಂದ ಆಯ್ಕೆಯಾಗಿದ್ದರು.
2026ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯವಾಗಿ ಹಾಲಿ ಶಾಸಕ, ಮುಸ್ಲಿಂಲೀಗಿನ ಎ.ಕೆ.ಎಂ ಅಶ್ರಪ್ ಐಕ್ಯರಂಗ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಎನ್.ಡಿ.ಎ ಹಾಗೂ ಸಿಪಿಎಂನಿಂದ ಕೆ.ಆರ್ ಜಯಾನಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಕಾಸರಗೋಡು ಕ್ಷೇತ್ರದಲ್ಲಿ 1980ರಿಂದ ಸತತವಾಗಿ ಮುಸ್ಲಿಂಲೀಗ್ ಅಭ್ಯರ್ಥಿಗಳು ಆಯ್ಕೆಯಾಗುತ್ತಾ ಬಂದಿದ್ದು, ಈ ಬಾರಿ ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಪಕ್ಷದ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ, ಸಿಪಿಐ(ಎಂ)ನಿಂದ ಶಾನವಾಸ್ ಪಾದೂರು ಸ್ಪರ್ಧಿಸುತ್ತಿದ್ದಾರೆ.
ಉದುಮ ಕ್ಷೇತ್ರದಲ್ಲಿ ಹಾಲಿ ಶಾಸಕ, ವಕೀಲ ಸಿ.ಎಚ್ ಕುಞಂಬು ಸಿಪಿಐ(ಎಂ)ನಿಂದ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಸಿಪಿಎಂ ಆಧಿಪತ್ಯ ಹೊಂದಿದ ಕ್ಷೇತ್ರ ಇದಾಗಿದ್ದು, 1991ರಿಂದ ಪಕ್ಷ ಸತತ ಗೆಲುವು ಸಾಧಿಸುತ್ತಾ ಬಂದಿದೆ. ಐಕ್ಯರಂಗದಿಂದ ಕೆ. ನೀಲಕಂಠನ್, ಬಿಜೆಪಿಯಿಂದ ಮನುಲಾಲ್ ಮೇಲತ್ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ. ಕಾಞಂಗಾಡು ಎಡರಂಗದ ಭದ್ರಕೋಟೆಯಾಗಿದ್ದು 1991ರಿಂದ ಸತತವಾಗಿ ಸಿಪಿಐ ಗೆಲುವು ಸಾಧಿಸುತ್ತಾ ಬಂದಿದೆ. ಈ ಬಾರಿ ಸಿಪಿಐನಿಂದ ಗೋವಿಂದನ್ ಪಳ್ಳಿಕ್ಕಲ್, ಕೆಇಸಿ(ಕೇರಳಕಾಂಗ್ರೆಸ್)ನಿಂದ ಶಾಜಿ ಒಟ್ಟಪಳ್ಳಿ, ಬಿಜೆಪಿಯಿಂದ ಎಂ. ಬಾಲರಾಜ್ ಸ್ಪರ್ಧಿಸುತ್ತಿದ್ದಾರೆ.
ತ್ರಿಕ್ಕರಿಪುರ ಕ್ಷೇತ್ರ ಕೇರಳದ ಮುಖ್ಯಮಂತ್ರಿಯಾಗಿದ್ದ ಹಿರಿಯ ಕಮ್ಯೂನಿಸ್ಟ್ ನೇತಾರ ಇ.ಎಂ.ಎಸ್ ನಂಬೂದಿರಿಪ್ಪಾಡ್, ಇ.ಕೆ ನಾಯನಾರ್ ಮೊದಲಾದವರನ್ನು ಆಯ್ಕೆಗೊಳಿಸಿದ ಕ್ಷೇತ್ರವಾಗಿದೆ. 1960ರಲ್ಲಿಒಂದು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ನಂತರದ ದಿನಗಳಲ್ಲಿ ಸಿಪಿಎಂ ಇಲ್ಲಿ ಪಾರಮ್ಯ ಮೆರೆಯುತ್ತಾ ಬಂದಿದೆ. ಈ ಬಾರಿ ಸಿಪಿಎಂನಿಂದ ವಿ.ಪಿ.ಪಿ ಮುಸ್ತಫಾ, ಕಾಂಗ್ರೆಸ್‍ನಿಂದ ಸಂದೀಪ್ ವಾರಿಯರ್, ಬಿಜೆಪಿ ಈ ಬಾರಿ ಟಿಟಿಪಿ(ಟ್ವೆಂಟಿ-ಟ್ವೆಂಟಿ ಪಾರ್ಟಿ)ಯೊಂದಿಗೆ ಸ್ಪರ್ಧಿಸುತ್ತಿದ್ದು, ರವಿ ಕುಳಂಗರ ಅವರನ್ನು ಕಣಕ್ಕಿಳಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ 2026ನೇ ಗಣತಿ ಪ್ರಕಾರ ಒಟ್ಟು 1209732 ಮಂದಿ ಮತದಾರರಿದ್ದು, 104866ಮಂದಿ ಪುರುಷ ಹಾಗೂ 104866ಮಂದಿ ಮಹಿಳಾ ಮತದಾರರಿದ್ದಾರೆ. ಏ. 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.



