HEALTH TIPS

ದೇವರ ಕಾಯುವವರಾರು: ಕೇರಳ ಚುನಾವಣೆ: ಈ ಬಾರಿ ಬದಲಾದೀತೆ ಆಡಳಿತ ಚುಕ್ಕಾಣಿ..?-ಒಂದು ವಿಶ್ಲೇಷಣೆ

'ದೇವರ ನಾಡು' ಎಂದು ಪ್ರಸಿದ್ಧವಾದ ಕೇರಳದಲ್ಲಿ ಬೇಸಿಗೆ ಧಗೆಯ ಜೊತೆಗೆ ಚುನಾವಣೆಯ ಕಾವು ಕೂಡ ಏರುತ್ತಿದೆ. ಏಪ್ರಿಲ್ 9 ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಣಾಹಣಿ ಮುಖ್ಯವಾಗಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ 'ಎಲ್‍ಡಿಎಫ್' ಹಾಗೂ ಕಾಂಗ್ರೆಸ್ ನೇತೃತ್ವದ 'ಯುಡಿಎಫ್' ಕೂಟಗಳ ನಡುವೆ ಇದ್ದರೂ, ಕಣದಲ್ಲಿ ಬಿಜೆಪಿಯೂ ಇರುವುದರಿಂದ ಕದನ ರಂಗೇರಿದೆ. ಪಿಣರಾಯಿ ವಿಜಯನ್ ನಾಯಕತ್ವದ ಎಲ್‍ಡಿಎಫ್ ಸತತ ಮೂರನೇ ಬಾರಿಗೆ ವಿಜಯಮಾಲೆ ಧರಿಸಲು ಕಾತರದಿಂದಿದೆ. ಆದರೆ, ಕಳೆದ 10 ವರ್ಷಗಳಿಂದ ವಿರೋಧಪಕ್ಷವಾಗಿರುವ ಯುಡಿಎಫ್ ಈ ಬಾರಿ ಅಧಿಕಾರದ ಗದ್ದುಗೆಗೇರಲು ಎಲ್ಲ ತಂತ್ರಗಳನ್ನು ಪ್ರಯೋಗಿಸುತ್ತಿದೆ.




ಕೇರಳದ ಮತದಾರ ಬೇರೆ ರಾಜ್ಯದ ಮತದಾರನಿಗಿಂತ ಭಿನ್ನ. ರಾಜ್ಯ ಪುನರ್ ವಿಂಗಡಣೆಯ ನಂತರ 1957ರಲ್ಲಿ ನಡೆದ ಮೊಟ್ಟ ಮೊದಲ ಚುನಾವಣೆಯಲ್ಲಿ ಆತ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಗೆಲ್ಲಿಸಿದ. ಅದು ಭಾರತದ ಮೊದಲ ಕಮ್ಯುನಿಸ್ಟ್ ಸರ್ಕಾರ! ರಾಜ್ಯದಲ್ಲಿ 1977ರಿಂದ 2021ರವರೆಗೂ ಯಾವುದೇ ಪಕ್ಷ (ಒಕ್ಕೂಟ) ಸತತವಾಗಿ ಮರು ಆಯ್ಕೆ ಆಗಿರಲಿಲ್ಲ. ಎಲ್‍ಡಿಎಫ್ 2016 ಹಾಗೂ 2021ರಲ್ಲಿ ಗೆದ್ದು, ವಿಜಯನ್ ಸತತ ಎರಡು ಬಾರಿಗೆ ಮುಖ್ಯಮಂತ್ರಿಯಾದರು, ಕೇರಳದ ರಾಜಕೀಯ ಇತಿಹಾಸದಲ್ಲಿ ದಾಖಲೆ ಬರೆದರು.

140 ಸದಸ್ಯ ಬಲವಿರುವ ಕೇರಳ ಅಸೆಂಬ್ಲಿಯಲ್ಲಿ ಎಡರಂಗದ ಮೈತ್ರಿಕೂಟ 2006ರಿಂದೀಚೆಗೆ ಜಯಗಳಿಸಿದಾಗಲೆಲ್ಲ ಭಾರೀ ಅಂತರದಿಂದ ಗೆಲುವು ಸಾಧಿಸಿದೆ -2006ರಲ್ಲಿ 98, 2016ರಲ್ಲಿ 91 ಮತ್ತು 2021ರಲ್ಲಿ 99 ಸ್ಥಾನ ಗಳಿಸಿದೆ. ಇದಕ್ಕೆ ವಿರುದ್ಧವಾಗಿ ಯುಡಿಎಫ್ ಸೋತಾಗ ಭಾರೀ ಸೋಲು ಅನುಭವಿಸುತ್ತಾ ಬಂದಿದೆ. 2006ರಲ್ಲಿ ಅದು ಗಳಿಸಿದ್ದು 42, 2016ರಲ್ಲಿ 47 ಹಾಗೂ 2021ರಲ್ಲಿ 41 ಸ್ಥಾನ. ಈ ಕೂಟ 2011ರಲ್ಲಿ ಬರೀ 2 ಸ್ಥಾನಗಳಿಂದ ಗೆದ್ದಿತ್ತು ಮತ್ತು ಎಡರಂಗ 2 ಸ್ಥಾನಗಳಿಂದ ಸೋತಿತ್ತು. ಆದರೆ, ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟ ಭಾರೀ ಜಯಗಳಿಸುತ್ತಾ ಬಂದಿದೆ.

2021ರಲ್ಲಿ ಎಡರಂಗ ಶೇ 45.43, ಯುಡಿಎಫ್ ಶೇ 39.47 ಹಾಗೂ ಬಿಜೆಪಿ ನೇತೃತ್ವದ ಎನ್‍ಡಿಎ ಶೇ 12.41ರಷ್ಟು ಮತಗಳಿಸಿದ್ದವು. ಬಹಳ ಹಿಂದೆಯೇ ಶೇ 100ರಷ್ಟು ಸಾಕ್ಷರತೆ ಹೊಂದಿದ್ದ ಈ ರಾಜ್ಯದ ಹಿಂದಿನ ಚುನಾವಣೆಗಳಲ್ಲಿ ಹೆಚ್ಚಿನ ಮಟ್ಟಿಗೆ ಅಲ್ಪ ಪ್ರಮಾಣದ ಅಂತರದಲ್ಲಿ ಸೋಲು- ಗೆಲುವಿನ ನಿರ್ಧಾರವಾಗಿತ್ತು. ಶೇ 1ರಷ್ಟು ಅಂತರದಲ್ಲಿ ಅನೇಕ ಸ್ಥಾನಗಳ ಫಲಿತಾಂಶ ನಿರ್ಣಯವಾಗಿತ್ತು. ಈ ಬಾರಿಯೂ ಇದೇ ಪ್ರವೃತ್ತಿ ಮುಂದುವರಿಯಬಹುದು.


ಎಡಪಕ್ಷಗಳ ದಶಕದ ಆಡಳಿತದ ನಂತರ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಕಳೆದ ಲೋಕಸಭೆ ಹಾಗೂ 2025ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರೀ ಜಯಗಳಿಸಿದ ನಂತರ ಪಕ್ಷ ಸಹಜವಾಗಿ ಹುಮ್ಮಸ್ಸಿನಲ್ಲಿದೆ. ಇದಕ್ಕೆ ಪ್ರತಿಯಾಗಿ ಎಲ್‍ಡಿಎಫ್ ತಾನು ನೀಡಿದ ಉತ್ತಮ, ಭ್ರಷ್ಟಾಚಾರರಹಿತ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ತನ್ನ ಕೈಬಿಡುವುದಿಲ್ಲ ಎಂಬ ನಿರೀಕ್ಷೆಯಲ್ಲಿದೆ.

ಈ ದಕ್ಷಿಣದ ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ, ಹಿಂದೂಗಳು ಶೇ 54.6ರಷ್ಟು ಇದ್ದಾರೆ. ಮುಸ್ಲಿಮರು ಶೇ 26.6 ಹಾಗೂ ಕ್ರೈಸ್ತರು ಶೇ 18.4ರಷ್ಟಿದ್ದಾರೆ. ಮುಸ್ಲಿಮರ ಸಂಖ್ಯೆ ಉತ್ತರ ಕೇರಳದಲ್ಲಿ (ಮಲ್ಲಾಪುರಂ, ಕಣ್ಣೂರು, ಕಾಸರಗೋಡು) ಹೆಚ್ಚಿದ್ದರೆ, ಕ್ರೈಸ್ತರ ಸಂಖ್ಯೆ ಮಧ್ಯ ಭಾಗದಲ್ಲಿ (ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ) ಹೆಚ್ಚಿದೆ. ಮುಸ್ಲಿಮರ ಮತ ಹೆಚ್ಚು ಪಾಲು ಯುಡಿಎಫ್‍ಗೆ ಹೋಗುವುದು ನಿಶ್ಚಿತ. ಆದರೆ, ಕ್ರೈಸ್ತರ ಮತ ನಿರ್ಣಾಯಕವೆಂದು ಹೇಳಲಾಗುತ್ತಿದೆ. ಬಿಜೆಪಿ ಕ್ರೈಸ್ತರ ಮತಬುಟ್ಟಿಗೆ ಕೈಹಾಕಿದೆ. ಆದರೆ, ಕ್ರೈಸ್ತರ ಮೇಲಿನ ದಾಳಿಗಳು ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಪ್ರಯತ್ನ ಬಿಜೆಪಿಗೆ ಪೂರಕವಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೂ ಹೋಗಿದ್ದ ಕ್ರೈಸ್ತ ಮತಗಳು ಈ ಬಾರಿ ಕಾಂಗ್ರೆಸ್‍ಗೆ ಮರಳಬಹುದು. ಕ್ರೈಸ್ತರು, ಮಧ್ಯ ಮತ್ತು ದಕ್ಷಿಣ ಭಾಗದ ಮತದಾರರು ಯಾರ ಪರವಾಗಿದ್ದಾರೆ ಎನ್ನುವುದರ ಮೇಲೆ ಕೇರಳದ ಫಲಿತಾಂಶ ಹಿಂದಿನಿಂದಲೂ ನಿಂತಿದೆ.


ಹಿಂದೂಗಳಲ್ಲಿ ಸುಮಾರು ಶೇ 22ರಷ್ಟು ಜನಸಂಖ್ಯೆ ಇದೆ ಎನ್ನಲಾದ ಈಳವ (ಈಡಿಗ) ಸಮುದಾಯ ಎಡರಂಗದ ಪರವಾಗಿರುವುದೇ ಹೆಚ್ಚು. ಆದರೆ, ಕೆಲವು ವರ್ಷಗಳಿಂದ ಈ ಸಮುದಾಯ ಸ್ವಲ್ಪಮಟ್ಟಿಗೆ ಬಿಜೆಪಿ ಪರವಾಗಿದೆ ಎನ್ನಲಾಗಿದೆ. ಹಾಗೆಯೇ, ಸುಮಾರು ಶೇ 12ರಷ್ಟಿರುವ ನಾಯರ್ ಸಮುದಾಯ ಕಾಂಗ್ರೆಸ್ ಬೆಂಬಲಿಗರಾಗಿದ್ದರೂ, ಇತ್ತೀಚೆಗೆ ಬಿಜೆಪಿ ಬಗ್ಗೆ ಮೃದುಧೋರಣೆ ಹೊಂದಿದೆ ಎನ್ನಲಾಗುತ್ತಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ 13ರಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರದ ಮಲಬಾರ್ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿದೆ; ಮಲ್ಲಾಪುರಂನಲ್ಲಿ ಹಿಂದೂಗಳಿಗಿಂತ ಹೆಚ್ಚಿದೆ. ಕಣ್ಣೂರ್ ಜಿಲ್ಲೆ ಬಹಳಷ್ಟು ಮತೀಯ ಸಂಘರ್ಷಗಳನ್ನು ಕಂಡಿದೆ. ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಹಾಗೂ ಅಲ್ಲಿನ ಚಿನ್ನದ ಕಳವು ವಿಚಾರದಲ್ಲಿ ಎಡಪಕ್ಷಗಳಿಗೆ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ. ಇದರ ಲಾಭ ಕಾಂಗ್ರೆಸ್‍ಗೆ ದಕ್ಕಬಹುದು.

ಕೇರಳದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಶಬರಿಮಲೆ ವಿಷಯದ ಬಗ್ಗೆ ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದ್ದರು; ಎಡರಂಗದ ಬಗ್ಗೆ ಬಿಜೆಪಿ ಮೃದುಧೋರಣೆ ಹೊಂದಿದೆ ಎಂದು ಆರೋಪಿಸಿದ್ದರು. ಎಡಪಂಥೀಯ ಗುಂಪು 'ಬಿಜೆಪಿಯ ಬಿ ಟೀಮ್' ಎಂದೂ ಜರಿದಿದ್ದರು. ಈಗಾಗಲೇ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಕೇರಳದಲ್ಲೂ ಮುನ್ನಡೆ ಸಾಧಿಸುವುದನ್ನು ತಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ವಿರೋಧಿ ರಾಷ್ಟ್ರಮಟ್ಟದ 'ಇಂಡಿಯಾ' ಗುಂಪಿನಲ್ಲಿ ಜೊತೆಯಾಗಿರುವ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೇರಳದಲ್ಲಿ ಹೇಗೆ ಪ್ರತಿಸ್ಪರ್ಧಿಗಳಾಗಲು ಸಾಧ್ಯ ಎಂದು ಕೇಸರಿ ಬಣ ಗೇಲಿ ಮಾಡಿದೆ.

ಎಲ್ಲಾ ಚುನಾವಣೆಗಳಂತೆ ಇಲ್ಲೂ ರಾಜಕೀಯ ಪಕ್ಷಗಳು ರಾಶಿ ಭರವಸೆಗಳನ್ನು ನೀಡಿವೆ. ಕರ್ನಾಟಕದಂತೆ ಕೇರಳದಲ್ಲೂ ಕಾಂಗ್ರೆಸ್ ಐದು 'ಗ್ಯಾರಂಟಿ'ಗಳ ಪಟ್ಟಿ ಬಿಡುಗಡೆ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಾಲಕಿಯರಿಗೆ ಮಾಸಿಕ ಸ್ಟೈಪೆಂಡ್, ಆರೋಗ್ಯ ವಿಮೆ ಆ ಗ್ಯಾರಂಟಿಗಳಲ್ಲಿದೆ. ಬಿಜೆಪಿ ಏಮ್ಸ್ ಮಾದರಿಯ ಆಸ್ಪತ್ರೆ, ವರ್ಷಕ್ಕೆ ಎರಡು ಉಚಿತ ಗ್ಯಾಸ್ ಸಿಲಿಂಡರ್, ಮಹಿಳಾ ಪೆನ್ಷನ್ ಸೇರಿದಂತೆ ಭರವಸೆಗಳ ಮಹಾಪೂರವನ್ನೇ ಹರಿಸಿದೆ. ಎಡರಂಗ ಹೆಚ್ಚಿನ ಘೋಷಣೆಗಳನ್ನು ಮಾಡಿಲ್ಲ. ತಾನು ಜಾರಿಗೊಳಿಸಿದ ಕಾರ್ಯಕ್ರಮಗಳು ಹಾಗೂ ನೀಡಿದ ಒಳ್ಳೆಯ ಆಡಳಿತ ತನ್ನ ಕೈಬಿಡುವುದಿಲ್ಲ ಎಂಬುದು ಈ ಕೂಟದ ನಂಬಿಕೆ.

ಹೆಚ್ಚುಕಡಿಮೆ ತನ್ನ ಎಲ್ಲಾ ಶಾಸಕರಿಗೆ ಟಿಕೆಟ್ ಕೊಟ್ಟಿದ್ದರೂ, ಸಿಪಿಐ(ಎಂ)ನಲ್ಲಿ ಅಪಸ್ವರಕ್ಕೇನೂ ಕೊರತೆಯಿಲ್ಲ. ಕೆಲವು ಕಡೆ ಪಕ್ಷದ ಭಿನ್ನಮತೀಯರು ಕಣದಲ್ಲಿದ್ದಾರೆ. ಕೆಲವರು ಕಾಂಗ್ರೆಸ್ ಸೇರಿದ್ದಾರೆ. 80 ವರ್ಷದ ವಿಜಯನ್ ಅವರಿಗೆ ಪಕ್ಷದೊಳಗಿನ ಪ್ರತಿಸ್ಪರ್ಧಿ ಎಂದೇ ಪ್ರಖ್ಯಾತರಾಗಿರುವ ಕೆ.ಕೆ. ಶೈಲಜಾ ಅವರಿಗೆ ಅವರ ಎಂದಿನ ಕ್ಷೇತ್ರ ತಪ್ಪಿಸಿ, ಕಷ್ಟವೇ ಎನ್ನಬಹುದಾದ ಕಣ್ಣೂರಿನ ಪೆರವೂರ್ ಕ್ಷೇತ್ರದ ಟಿಕೆಟ್ ಕೊಡಲಾಗಿದೆ. ಇದು ಕಾಂಗ್ರೆಸ್‍ನ ಭದ್ರಕೋಟೆ. ಅಲ್ಲಿ ಅವರ ಪ್ರತಿಸ್ಪರ್ಧಿ, ಐದನೇ ಬಾರಿಗೆ ಗೆಲುವು ನಿರೀಕ್ಷಿಸುತ್ತಿರುವ, ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್.

ಯುಡಿಎಫ್ ಮುಖ್ಯ ಅಂಗ ಕಾಂಗ್ರೆಸ್ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾಗಿರುವುದು ಪಕ್ಷದ ಆಂತರಿಕ ಕಲಹ. ಅಸೆಂಬ್ಲಿಯ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್, ಹಿರಿಯ ನಾಯಕ ರಮೇಶ ಚೆನ್ನಿತಾಲ, ಸಂಸದ ಕೆ.ಸಿ. ವೇಣುಗೋಪಾಲ್ ಕಾಂಗ್ರೆಸ್ ಒಳಗಿನ ಬಣಗಳ ನಾಯಕರು. ಇನ್ನೊಂದು ಮುಖ್ಯ ಅಂಶ, ವಿಜಯನ್ ಅವರಂತಹ 'ಮಾಸ್ ಲೀಡರ್' ಕಾಂಗ್ರೆಸ್‍ನಲ್ಲಿ ಇಲ್ಲದಿರುವುದು. ಕೆ. ಕರುಣಾಕರನ್, ಎ.ಕೆ. ಆಂಟನಿ, ಉಮನ್ ಚಾಂಡಿ ಅವರಂತಹ ಸಮೂಹವನ್ನು ಆಕರ್ಷಿಸುವ ಜನನಾಯಕರ ಕೊರತೆ ಪಕ್ಷದಲ್ಲಿ ಎದ್ದು ಕಾಣುತ್ತಿದೆ.

ಈ ಎರಡು ಕೂಟಗಳ ಮಧ್ಯೆ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವುದು ಬಿಜೆಪಿ ನಾಯಕತ್ವದ ಎನ್‍ಡಿಎ. 2021ರ ಅಸೆಂಬ್ಲಿ ಕದನದಲ್ಲಿ ನೆಲ ಕಚ್ಚಿದ್ದರೂ, 2024ರ ಲೋಕಸಭೆಯಲ್ಲಿ ತ್ರಿಶ್ಶೂರ್‍ನಲ್ಲಿ ಹಾಗೂ 2025ರ ಸ್ಥಳೀಯಾಡಳಿತ ಚುನಾವಣೆಯ ತಿರುವನಂತಪುರಂ ಮುನಿಸಿಪಲ್ ಕಾರ್ಪೋರೇಷನ್‍ನಲ್ಲಿ ಜಯಗಳಿಸಿ ಬಿಜೆಪಿ ಮತ್ತೆ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಿದೆ. ಬಿಜೆಪಿಯ ಪ್ರಭಾವ ಇರುವ ಕಾಸರಗೋಡು, ಮಂಜೇಶ್ವರ, ತ್ರಿಶೂರ್, ಪಾಲಕ್ಕಾಡ್ ಕ್ಷೇತ್ರಗಳಲ್ಲಿ ಕುತೂಹಲಕಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries