ಮುಂಬೈ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಧಾರ್ಮಿಕ ಗುರುತನ್ನು ಉಲ್ಲೇಖಿಸಿ, ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾದ ವ್ಯಕ್ತಿಯ ಮನೆಯಲ್ಲಿ 'ಒಂಟಿ ತೋಳ ದಾಳಿ' ಮಾದರಿ ಮತ್ತು 'ಇಸ್ಲಾಮಿಕ್ ಸ್ಟೇಟ್'ನ ಉಲ್ಲೇಖವಿರುವ ಟಿಪ್ಪಣಿಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಜೈಬ್ ಜುಬೇರ್ ಅನ್ಸಾರಿ (31) ಬಂಧಿತ. ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ನೆಲಸಿದ್ದ ಆರೋಪಿಯು ತೀವ್ರಗಾಮಿಯಾದಂತೆ ಕಾಣುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಈ ಘಟನೆ, 'ಒಂಟಿ ತೋಳ ದಾಳಿ'ಯಂತೆ ಕಂಡುಬಂದಿದೆ ಎಂದು ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಸಂಘಟನೆ ಸಹಾಯ ಅಥವಾ ಪ್ರಚೋದನೆಯಿಲ್ಲದೆ ನಡೆಸುವ ಭಯೋತ್ಪಾದಕ ದಾಳಿಯನ್ನು 'ಒಂಟಿ ತೋಳ ದಾಳಿ' ಎನ್ನುತ್ತಾರೆ.
'ಆರೋಪಿಯು ಮೊದಲಿಗೆ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ಆಸುಪಾಸಿನಲ್ಲಿ ಮಸೀದಿ ಎಲ್ಲಿದೆ ಎಂದು ಕೇಳಿದ್ದಾನೆ. ಈ ವೇಳೆ ಅವರು ತಮಗೆ ತಿಳಿದಿಲ್ಲ ಎಂದು ಉತ್ತರಿಸಿದ್ದು, ಆಗ ಆರೋಪಿ ನೀವು ಹಿಂದೂಗಳೇ ಎಂದು ಪ್ರಶ್ನಿಸಿ ಅಲ್ಲಿಂದ ತೆರಳಿದ್ದನು. ಅದಾಗಿ ಕೆಲವೇ ಕ್ಷಣದಲ್ಲಿ ವಾಪಸಾದ ಆರೋಪಿ, ತನ್ನಲ್ಲಿದ್ದ ಚಾಕುವನ್ನು ಹೊರತೆಗೆದು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ದಾಳಿಗೂ ಮೊದಲು ಆತ ನೀವು ಹಿಂದೂ ಹೌದೇ ಎಂದು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಹಿಂದೂ ಅಲ್ಲವೆಂದರೆ ಕಲ್ಮಾ ಪಠಿಸಲು ಕೇಳಿದ್ದ. ಕಲ್ಮಾ ಪಠಿಸಲು ತಿಳಿಯದ ಅವರನ್ನು ಆರೋಪಿ ಇರಿದಿದ್ದ' ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯ ವಿಡಿಯೊ ಕೂಡ ಹರಿದಾಡಿದೆ.

