HEALTH TIPS

ಲಭಿಸದ ಠೇವಣಿ ಹಣ; ಸಹೋದರಿಯ ಅಸ್ಥಿಪಂಜರವನ್ನೇ ತಂದು ಬ್ಯಾಂಕ್ ಮುಂದೆ ಇಟ್ಟ!

ಒಡಿಶಾ: ಭಾರತ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂಬುದು ಒಂದು ಕಡೆಯಾದರೆ, ದೇಶದಲ್ಲಿ ಇನ್ನೂ ಅನೇಕ ಸಂಖ್ಯೆಯಲ್ಲಿರುವ ಅನಕ್ಷರಸ್ಥರು, ಬಡವರು, ಬುಡಕಟ್ಟು, ಆದಿವಾಸಿ ಜನ ಪಡಬಾರದ ಪಡಿಪಾಟಲುಗಳನ್ನು ಪಡುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಅಷ್ಟೇ ಅಲ್ಲದೇ ಗ್ರಾಹಕರೊಂದಿಗೆ ದೇಶದ ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅನೇಕ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಮತ್ತು ಅದರಲ್ಲೂ ಅನಕ್ಷರಸ್ಥರೊಂದಿಗೆ ಅವರ ವರ್ತನೆಗಳು ಎಷ್ಟು ಕೆಟ್ಟದಾಗಿ ಇರುತ್ತವೆ ಎಂಬುದೂ ಸಹ ಅನೇಕ ಸಲ ಸಾಬೀತಾಗಿದೆ.

ಅನಕ್ಷರಸ್ಥ ಬುಡಕಟ್ಟು ವ್ಯಕ್ತಿಯೊಬ್ಬ ಬ್ಯಾಂಕ್‌ನಲ್ಲಿ ತನ್ನ ಮೃತ ಸಹೋದರಿ ಹೆಸರಲ್ಲಿದ್ದ ಠೇವಣಿ ಹಣ ಹಿಂಪಡೆಯಲಾಗದೇ ಕಡೆಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದು ಬ್ಯಾಂಕ್‌ ಮುಂದೆ ಇಟ್ಟಿದ್ದ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿದೆ.

ಈ ಘಟನೆ ಕೇವಲ ಒಡಿಶಾ ಅಷ್ಟೇ ಅಲ್ಲದೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಮೇಲೆ ಹೇಳಿರುವ ಎರಡು ನಿದರ್ಶನಗಳಿಗೆ ಕನ್ನಡಿ ಹಿಡಿದಂತಾಗಿದೆ.

ಏನಿದು ಘಟನೆ?

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಟಣಾ ತಾಲ್ಲೂಕಿನ ದೈನಾಳಿ ಎಂಬ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ (50) ಅವರ ಹಿರಿಯ ಸಹೋದರಿ ಕರ್ಳಾ ಮುಂಡಾ (56) ಕಳೆದ ಜನವರಿ 26 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು.

ಹಸು ಮಾರಾಟ ಮಾಡಿ ಬಂದಿದ್ದ ₹20,000 ಹಣವನ್ನು 'ಒಡಿಶಾ ಗ್ರಾಮೀಣ ಬ್ಯಾಂಕ್‌'ನ ಪಟಣಾ ತಾಲ್ಲೂಕಿನ ಮಾಳಿಪೋಶಿ ಶಾಖೆಯಲ್ಲಿ ಕರ್ಳಾ ಅವರು ಠೇವಣಿ ಇರಿಸಿದ್ದರು.

ಕರ್ಳಾ ಅವರ ನಿಧನದ ನಂತರ ಠೇವಣಿ ಹಣ ಪಡೆಯಲು ಜೀತು ಮುಂಡಾ ಬ್ಯಾಂಕಿಗೆ ಅಲೆದಾಡಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಬುಡಕಟ್ಟು ವ್ಯಕ್ತಿಯ ಹಿನ್ನೆಲೆ ನೋಡದೇ, ಯಥಾವತ್ತು ತಮ್ಮ ಹಳೆಯ ಚಾಳಿಯಂತೆ 'ದಾಖಲೆಗಳನ್ನು ತಂದು ತೆಗೆದುಕೊಂಡು' ಹೋಗು ಎಂದಿದ್ದಾರೆ.

ಏನು ಮಾಡಬೇಕು.. ಎಂದು ತಿಳಿಯದೇ ಕೆಲದಿನಗಳ ಬಳಿಕ ಮತ್ತೆ ಬ್ಯಾಂಕ್‌ಗೆ ಹೋದ ಜೀತು ಅವರು, ಹಣ ನೀಡುವಂತೆ ಕೇಳಿದ್ದಾರೆ. ಈ ಸಾರಿ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ಬ್ಯಾಂಕ್ ಸಿಬ್ಬಂದಿ, 'ಅವಳು ಸತ್ತಿದ್ದಾಳೆ ಎನ್ನುವುದಕ್ಕೆ ಏನು ದಾಖಲೆ? ದಾಖಲೆ ತಂದು ತೆಗೆದುಕೊಂಡು ಹೋಗು' ಎಂದು ಗದರಿಸಿದ್ದಾರೆ.

ಈ ಸಾರಿ ಬಹಳ ಗಂಭೀರವಾದ ಜೀತು, ಸೀದಾ ಸ್ಮಶಾನಕ್ಕೆ ಹೋಗಿ ತನ್ನ ಸಹೋದರಿ ಕರ್ಳಾಳನ್ನು ಹೂತು ಹಾಕಿದ್ದ ಸಮಾಧಿ ಅಗೆದಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಚೀಲದಲ್ಲಿ ಕಟ್ಟಿ, ಹೆಗಲ ಮೇಲೆ ಹೊತ್ತುಕೊಂಡು ಸುಮಾರು 3 ಕಿ.ಮೀ ನಡೆದುಕೊಂಡೇ ಬ್ಯಾಂಕ್ ಮುಂದೆ ತಂದು ಇಟ್ಟಿದ್ದಾರೆ.

'ಇವಳೇ ನೋಡಿ ನನ್ನ ಅಕ್ಕ, ಸತ್ತವಳು.. ಇವಾಗಲಾದರೂ ನಿಮಗೆ ನಂಬಿಕೆ ಬಂತಾ, ಹಣ ಕೊಡಿ' ಎಂದು ಅಂಗಲಾಚಿದ್ದಾನೆ.

ಕೊಳೆತ ಶವದ ಅಸ್ಥಿಪಂಜರವನ್ನು ನೋಡಿದ ಬ್ಯಾಂಕ್ ಸಿಬ್ಬಂದಿ ಭಯಭೀತರಾಗಿದ್ದಾರೆ. ಚೀರಾಡಿ ಬ್ಯಾಂಕ್‌ನ ಬಾಗಿಲು ಹಾಕಿಕೊಂಡಿದ್ದಾರೆ.

ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಬ್ಯಾಂಕ್‌ನ ನಿಯಮಾವಳಿಗಳನ್ನು ತಿಳಿಸಿ ಹೇಳಿ, ನಾವು ನಿನಗೆ ಸಹಾಯ ಮಾಡುತ್ತೇವೆ ಎಂದು ಸಂತ್ರಸ್ತ ಜೀತು ಅವರಿಗೆ ಭರವಸೆ ನೀಡಿದ್ದಾರೆ.

ಈ ಘಟನೆ ಸದ್ದು ಮಾಡುತ್ತಿದ್ದಂತೆ ಹಿರಿಯ ಅಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅನಕ್ಷರಸ್ಥರ ಬಳಿ ವ್ಯವಹರಿಸುವ ರೀತಿಯನ್ನು ನೆನಪಿಸಿದ್ದಾರೆ.

ಜೀತು ಮುಂಡಾ ಅಸ್ಥಿಪಂಜರವನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೊ, ಫೋಟೊಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಜೀತು ಅವರ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಲ್ಲಿ ತಾಂತ್ರಿಕವಾಗಿ ಬ್ಯಾಂಕ್ ಸಿಬ್ಬಂದಿಯ ತಪ್ಪಿಲ್ಲದಿದ್ದರೂ, ಬುಡಕಟ್ಟು ವ್ಯಕ್ತಿಗೆ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದನ್ನು ಸರಿಯಾಗಿ ತಿಳಿ ಹೇಳಿ, ಸಹಾಯ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬ್ಯಾಂಕ್ ಸಿಬ್ಬಂದಿಗಳ ಅತ್ಯಂತ ಕೆಟ್ಟ ವರ್ತನೆಗೆ ಈ ಘಟನೆ ತಾಜಾ ಉದಾಹರಣೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಕ್ಷೇತ್ರದಲ್ಲಿಯೇ ನಡೆದಿದ್ದು ಈ ಘಟನೆ!

ಒಡಿಶಾದಲ್ಲಿ 2024ರಲ್ಲಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಯಿಂದ ಮೋಹನ್ ಚರಣ್ ಮಾಝಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮೋಹನ್ ಚರಣ್ ಅವರು ಕಿಯೋಂಜಾರ್ ಜಿಲ್ಲೆಯ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಬುಡಕಟ್ಟು ಜನ ಹೆಚ್ಚಿರುವ ಹಾಗೂ ಸಿಎಂ ಅವರ ತವರು ನೆಲದಲ್ಲಿಯೇ ಜೀತು ಮುಂಡಾ ಅವರ ಘಟನೆ ನಡೆದಿದ್ದು, ಅನೇಕರು ಸಿಎಂ ಅವರನ್ನೂ ಟೀಕಿಸಿದ್ದಾರೆ.

ಈ ಘಟನೆ ಬಗ್ಗೆ ಸಿಎಂ ಮೋಹನ್ ಚರಣ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲವಾದರೂ ಕಿಯೋಂಜಾರ್ ಬಿಜೆಪಿ ಸಂಸದ ಬಲಭದ್ರ ಮಾಝಿ ಅವರು ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಆ ಬ್ಯಾಂಕ್‌ನವರು ಇಂತಹ ಹೇಯ ಕೆಲಸ ಮಾಡಬಾರದಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries