ಕಾಸರಗೋಡು :ಪ್ರತಿಯೊಂದು ಆತ್ಮದಲ್ಲಿರುವ ಪರಮಾತ್ಮ ಚೈತನ್ಯ ವನ್ನು ಉದ್ದೀಪನಗೊಳಿಸುವಲ್ಲಿ ಭಗವತ್ ಆರಾಧನೆ ಅಗತ್ಯ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದ್ದಾರೆ.
ಕಾಸರಗೋಡು ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ತತ್ವಮಸಿ ವೇದಿಕೆಯಲ್ಲಿ ಶನಿವಾರ ರಾತ್ರೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯೊಂದಿಗೆ ಆಯಾ ಪ್ರದೇಶಗಳ ಜನರ ಏಳಿಗೆಯೂ ಸಾಧ್ಯ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಜನರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಆಸ್ರ ಅನುಗ್ರಹ ಭಾಷಣ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಕೆ.ಎನ್. ಬಾಲಕೃಷ್ಣನ್ ಚೆನ್ನಿಕೆರೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅರ್ಚಕ ಶಾಸ್ತರ ಗಣನಾಥ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಸಮಾರಂಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ, ವಕೀಲ ಎ. ಸದಾನಂದ ರೈ, ಶ್ರೀ ನುಳ್ಳಿಪ್ಪಾಡಿ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಟ್ರಸ್ಟ್ ಅಧ್ಯಕ್ಷ ಗಣೇಶ್ ಅಮೈ, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕೆ. ಎಂ. ಕೋಟೆಕಣಿ, ಉಪಾಧ್ಯಕ್ಷ ರವೀಂದ್ರ ಕೋಟೆಕಣಿ, ರಾಮನ್ ಚೆನ್ನಿಕೆರೆ, ಕೋಶಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.



