ಕಾಸರಗೋಡು : ವೇಗವಾಗಿ ರೈಲು ಸಂಚರಿಸುತಿದ್ದಾಗ ಉಂಟಾದ ಗಾಳಿಯ ರಭಸಕ್ಕೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಐದರ ಹರೆಯದ ಬಾಲಕಿ ಮೃತಪಟ್ಟಿದ್ದಾಳೆ. ಚೆಂಗಳ ಪಂಚಾಯಿತಿ ನಾಲ್ಕನೇ ಮೈಲಿಗಲ್ಲು ನಿವಾಸಿ ತಾಹಿರ್ ನಜಾತ್- ಆಯಿಷಾ ದಂಪತಿ ಪುತ್ರಿ ಮರಿಯಂ ನವಾಲ್ ಮೃತಪಟ್ಟ ಬಾಲಕಿ. ಬಾಲಕಿ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಳು.
ಏ. 18ರಂದು ಸಂಜೆ ಮೊಗ್ರಾಲ್ ನಾಂಗಿ ಪ್ರದೇಶದಲ್ಲಿ ರೈಲು ಸಂಚಾರದ ಮಧ್ಯೆ ದುರಂತ ಸಂಭವಿಸಿತ್ತು. ತನ್ನ ಅಜ್ಜಿ ನಫೀಸಾ ಅವರ ಜತೆ ನಡೆದು ಹೋಗುತ್ತಿದ್ದಾಗ ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಾವೇಲಿ ಎಕ್ಸ್‍ಪ್ರೆಸ್ ಹಾದುಹೋಗುವ ಮಧ್ಯೆ ಬಿರುಸಿನ ಗಾಳಿಗೆ ನಫೀಸಾ ಹಾಗೂ ಮೊಮ್ಮಗಳು ಮರಿಯಂನವಾಲ್ ಆಯತಪ್ಪಿ ಬಿದ್ದಿದ್ದರು. ಇದನ್ನು ಕಂಡ ರೈಲಿನ ಲೋಕೋ ಪೈಲೆಟ್ ಕಾಸರಗೋಡು ರೈಲ್ವೇ ಅಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಕುಂಬಳೆ ಪೆÇಲೀಸ್ ಹಾಗೂ ನಾಗರಿಕರು ನಡೆಸಿದ ಹುಡುಕಾಟದಿಂದ ನಫೀಸಾ ಹಾಗೂ ಬಾಲಕಿ ರೈಲು ಹಳಿಯ ಸಮೀಪ ಬಿದ್ದು ಗಾಯಗೊಂಡಿರುವುದು ಪತ್ತೆಯಾಗಿತ್ತು. ನಫೀಸಾ ಚೇತರಿಸುತ್ತಿದ್ದಾರೆ.


