ನವದೆಹಲಿ: ಲಷ್ಕರ್- ಎ-ತಯಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ಬಂಧಿಸಲಾಗಿರುವ ಆರೋಪಿಗಳು ಭಯೋತ್ಪಾದಕರಿಗೆ ನಕಲಿ ಆಧಾರ್, ಪ್ಯಾನ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೇರಿದಂತೆ ವಿವಿಧ ದಾಖಲೆಗಳನ್ನು ಒದಗಿಸಲು ನೆರವಾಗಿರುವ ಸಂಗತಿ ವಿಚಾರಣೆಯಿಂದ ಗೊತ್ತಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೇಂದ್ರ ಗುಪ್ತಚರ ಸಂಸ್ಥೆಗಳ ಸಮನ್ವಯದೊಂದಿಗೆ ಎಲ್‌ಇಟಿಯ ಅಂತರರಾಜ್ಯ ಜಾಲವನ್ನು ಭೇದಿಸಿದ್ದರು. ದೇಶದ ವಿವಿಧೆಡೆ ವಿಸ್ತರಿಸಿದ್ದ ಜಾಲಗಳ ಮೇಲೆ ಕೇಂದ್ರ ಸಂಸ್ಥೆಗಳು ಹಾಗೂ ರಾಜ್ಯಗಳ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದರು.
ಮಾರ್ಚ್ 31ರಂದು ಕಾರ್ಯಾಚರಣೆ ಆರಂಭವಾಗಿದ್ದು, ಪಾಕಿಸ್ತಾನಿ ಭಯೋತ್ಪಾದಕರಾದ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಹಾಗೂ ಉಸ್ಮಾನ್ ಅಲಿಯಾಸ್ ಖುಬೈಬ್, ಶ್ರೀನಗರ ನಿವಾಸಿಗಳಾದ ಮೊಹಮ್ಮದ್ ನಖೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ ಅಲಿಯಾಸ್ ಮಾಮಾನನ್ನು ಬಂಧಿಸಲಾಗಿತ್ತು. ಬಂಧಿತರ ಪೈಕಿ ಶ್ರೀನಗರದ ಮೂವರು ಆರೋಪಿಗಳು ಭಯೋತ್ಪಾದಕರಿಗೆ ಆಶ್ರಯ, ಆಹಾರ ಮತ್ತು ಸಾಗಣೆ ಬೆಂಬಲ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
'ಭಯೋತ್ಪಾದಕರ ಪೈಕಿ ಒಬ್ಬನನ್ನು ಉಮರ್ ಅಲಿಯಾಸ್ ಖಾರ್ಘೋಷ್ (ಮೊಲ) ಎಂದು ಗುರುತಿಸಲಾಗಿದೆ. ಪಾಸ್‌ಪೋರ್ಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಈತ ಇಂಡೊನೇಷ್ಯಾಕ್ಕೆ ಪರಾರಿಯಾಗಿದ್ದ. ಆತ ಮತ್ತೊಂದು ನಕಲಿ ಪ್ರಯಾಣ ದಾಖಲೆಯನ್ನು ಬಳಸಿ ಕೊಲ್ಲಿ ದೇಶಕ್ಕೆ ತೆರಳಿ ನೆಲಸಿದ್ದಾನೆ' ಎಂದು ಮಾಹಿತಿ ನೀಡಿದ್ದಾರೆ.
'ಪಾಕಿಸ್ತಾನದ ಕರಾಚಿ ನಿವಾಸಿಯಾದ ಉಮರ್ 2012ರ ನಂತರ ಭಾರತಕ್ಕೆ ನುಸುಳಿದ್ದ. 2024ರಲ್ಲಿ ರಾಜಸ್ಥಾನದ ಜೈಪುರದಿಂದ ಪಡೆದ ನಕಲಿ ಪಾಸ್‌ಪೋರ್ಟ್ ಬಳಸಿ ಪರಾರಿಯಾಗಿದ್ದ. ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕಾಶ್ಮೀರದ ಹೊರಗೂ ತನ್ನ ಜಾಲವನ್ನು ಸ್ಥಾಪಿಸಲು ಯಶಸ್ವಿಯಾಗಿದ್ದ' ಎಂದು ತಿಳಿಸಿದ್ದಾರೆ.
'ನಾನು ಮತ್ತು ಉಮರ್ ಭಾರತದಾದ್ಯಂತ ವಿಶೇಷವಾಗಿ ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಸಂಚರಿಸಿದ್ದೆವು' ಎಂದು ಅಬ್ದುಲ್ಲಾ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಕಾಶ್ಮೀರದ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ್ದ ವ್ಯಕ್ತಿಯ ಪುತ್ರಿಯೊಂದಿಗೆ ಈ ತಲೆಮರೆಸಿಕೊಂಡ ಭಯೋತ್ಪಾದಕ ಮಾಡಿಕೊಂಡ ವಿವಾಹ ಸಮಾರಂಭವೂ ಸೇರಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

