ಕೊಲಂಬೊ: ಭಾರತದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಶ್ರೀಲಂಕಾಕ್ಕೆ ಆಗಮಿಸಿದ್ದಾರೆ. ಇದು ಅವರು ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡ ಮೊದಲ ವಿದೇಶ ಪ್ರವಾಸವಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ನಾಗರಿಕ ಸಂಬಂಧಗಳನ್ನು ಬಲಪಡಿಸಲು ಮತ್ತು ಜನರ ನಡುವಿನ ಸಂಪರ್ಕವನ್ನು ವೃದ್ಧಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಧಾಕೃಷ್ಣನ್ ಅವರು ಎರಡು ದಿನಗಳ ಪ್ರವಾಸದ ಅಂಗವಾಗಿ ಕೊಲಂಬೊ ತಲುಪಿದ್ದಾರೆ. ಭಾರತದ ಉಪರಾಷ್ಟ್ರಪತಿಯೊಬ್ಬರು ಶ್ರೀಲಂಕಾಕ್ಕೆ ನೀಡುತ್ತಿರುವ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿ ಇದಾಗಿದೆ. ಈ ಭೇಟಿಯು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಪ್ರವಾಸದ ಅವಧಿಯಲ್ಲಿ ಉಪರಾಷ್ಟ್ರಪತಿಗಳು ಶ್ರೀಲಂಕಾದ ಉನ್ನತ ನಾಯಕರನ್ನು ಭೇಟಿ ಮಾಡಲಿದ್ದಾರೆ. ಭಾರತೀಯ ಮೂಲದ ತಮಿಳು ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ.

