ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವೆ ಪ್ರಮುಖ ಮಧ್ಯವರ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಪಾಕಿಸ್ತಾನದ ಪ್ರಯತ್ನಗಳನ್ನು ಈಗ ಸದ್ದಿಲ್ಲದೆ ಮರು ವಿಶ್ಲೇಷಿಸಲಾಗುತ್ತಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್18 ವರದಿ ಮಾಡಿದೆ.
ಸ್ಥಗಿತಗೊಂಡ ಮಾತುಕತೆಯಲ್ಲಿ ತನ್ನ ಪಾತ್ರವನ್ನು ಬಲಪಡಿಸಲು ಪಾಕಿಸ್ತಾನವು ಚೀನಾದ ನೆರವು ಬಯಸಿದೆ. ಈ ಬೆಳವಣಿಗೆಯು ಪಾಕಿಸ್ತಾನದ ಏಕವ್ಯಕ್ತಿ ಪ್ರಯತ್ನದ ಬಗ್ಗೆ ಇರಾನ್‍ನಲ್ಲಿ ಹೆಚ್ಚುತ್ತಿರುವ ಅಪನಂಬಿಕೆಯನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.
ಮೂಲಗಳ ಪ್ರಕಾರ ಇರಾನ್‍ನ ಪ್ರಮುಖ ಬೇಡಿಕೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ `ಆರು ಅಂಶಗಳ' ಚೌಕಟ್ಟು ಪ್ರಸ್ತುತ ಪರಿಗಣನೆಯಲ್ಲಿದೆ. ಈ ಚೌಕಟ್ಟನ್ನು ಚೀನಾದೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾಗಿದೆ ಮತ್ತು ಇದು ಅಮೆರಿಕ-ಇರಾನ್ ನಡುವೆ ಸ್ಥಗಿತಗೊಂಡಿರುವ ಮಾತುಕತೆಯನ್ನು ಪುನರಾರಂಭಿಸಲು ಆರಂಭಿಕ ಹಂತವಾಗಿ ಕಾರ್ಯನಿರ್ವಹಿಸಬಹುದು. ಇರಾನ್ ಮತ್ತು ಪಾಕಿಸ್ತಾನ ನಡುವೆ ನಂಬಿಕೆ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇವಲ ಪಾಕಿಸ್ತಾನದ ಮೇಲೆ ಅವಲಂಬಿತವಾಗಿರುವುದು ಇರಾನ್‍ನ ಸಮಾಲೋಚಕರಿಗೆ ಇಷ್ಟವಿಲ್ಲ. ಬಲವಾದ, ದೀರ್ಘಕಾಲ ಅಸ್ತಿತ್ವದಲ್ಲಿರುವ ಭರವಸೆಗಳನ್ನು ಖಚಿತಪಡಿಸಿಕೊಳ್ಳಲು ಚೀನಾದ ಒಳಗೊಳ್ಳುವಿಕೆಯನ್ನು ಅವರು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಸ್ಥಿರ, ಸದೃಢ ಗ್ಯಾರಂಟಿಗಳನ್ನು ಇರಾನ್ ಬಯಸುತ್ತಿದ್ದು ಇದನ್ನು ಒದಗಿಸಲು ಚೀನಾಕ್ಕೆ ಹೆಚ್ಚಿನ ಸಾಮಥ್ರ್ಯವಿದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ. ಚೀನಾದ ಸೇರ್ಪಡೆಯನ್ನು ಕಾರ್ಯತಂತ್ರದ ಅಗತ್ಯವಾಗಿಯೂ ನೋಡಲಾಗುತ್ತಿದೆ. ಚೀನಾವು ಇರಾನ್‍ನೊಂದಿಗೆ ನಿಕಟ ಸಂಬಂಧವನ್ನು ನಿರ್ವಹಿಸುತ್ತಿದೆ ಮತ್ತು ಪ್ರಾದೇಶಿಕ ಸ್ಥಿರತೆಯಲ್ಲಿ ಗಮನಾರ್ಹ ಪಾಲನ್ನು ಹೊಂದಿರುವುದರಿಂದ ಅದರ ಉಪಸ್ಥಿತಿಯು ಯಾವುದೇ ಪ್ರಸ್ತಾವಿತ ವ್ಯವಸ್ಥೆಗೆ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಪ್ರಸ್ತಾವಿತ ಚೌಕಟ್ಟು ` ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ನಿರಸ್ತ್ರೀಕರಣ, ಭದ್ರತಾ ಭರವಸೆಗಳು, ದೀರ್ಘಾವಧಿಯ ಖಾತರಿಗಳು ಮತ್ತು ಭವಿಷ್ಯದ ಮಾತುಕತೆಗಾಗಿ ರಚನಾತ್ಮಕ ಮಾರ್ಗಸೂಚಿ ಸೇರಿದಂತೆ ಪ್ರಮುಖ ವಿಷಯಗಳ' ಮೇಲೆ ಕೇಂದ್ರೀಕೃತವಾಗಿದೆ. ಜೊತೆಗೆ ಅಮೆರಿಕ-ಇರಾನ್ ನಡುವಿನ ಆರ್ಥಿಕ ಸಹಕಾರವನ್ನು ವಿಸ್ತರಿಸಲೂ ಪ್ರಯತ್ನಿಸುತ್ತದೆ.
ಚೀನಾದ ಪಾಲ್ಗೊಳ್ಳುವಿಕೆ ಆಕಸ್ಮಿಕವಲ್ಲ. ಚೀನಾವು ಇರಾನ್‍ನೊಂದಿಗೆ ಆಳವಾದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ನಿರ್ವಹಿಸುತ್ತದೆ ಮತ್ತು ಜಾಗತಿಕ ಇಂಧನ ಹರಿವಿನ ನಿರ್ಣಾಯಕ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಯ ಸ್ಥಿರತೆಯಲ್ಲಿ ನೇರ ಆಸಕ್ತಿಯನ್ನು ಹೊಂದಿದೆ. ಹಾರ್ಮುಝ್ ನಲ್ಲಿ ನೌಕೆಗಳ ಪ್ರಯಾಣಕ್ಕೆ ತಡೆಯಾಗಿರುವುದರಿಂದ ಚೀನಾ ಇಂಧನ ಪೂರೈಕೆ ಸಮಸ್ಯೆಯನ್ನು ಎದುರಿಸುತ್ತಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಕಡಿಮೆಯಾಗುವುದು ಚೀನಾಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮುಖ್ಯವಾಗಿದೆ. ಇದು ಚೀನಾದ ಒಳಗೊಳ್ಳುವಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ.

