ವಾಷಿಂಗ್ಟನ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ ತಾನು ಶ್ವೇತಭವನದ ಅಧಿಕಾರಿ ಎಂಬುದಾಗಿ ಭಾರತದ ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಪರಿಚಯಿಸಿಕೊಂಡಿದ್ದ ಎಂದು ವರದಿಯಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಮೊದಲ ಅವಧಿಗೆ ಅಧಿಕಾರಕ್ಕೇರಿದ್ದ ವೇಳೆ, ಅನಿಲ್ ಅಂಬಾನಿ ಅವರು ಉಭಯ ರಾಷ್ಟ್ರಗಳ ಭದ್ರತಾ ಕಾರ್ಯತಂತ್ರ ರೂಪಿಸುವಲ್ಲಿ ಆಸಕ್ತಿ ತೋರಿದ್ದರು ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಎಪ್ಸ್ಟೈನ್ 2017ರಲ್ಲಿ ಆನ್ಲೈನ್ ಮೂಲಕ ಅನಿಲ್ ಅಂಬಾನಿ ಅವರನ್ನು ಪರಿಚಯ ಮಾಡಿಕೊಂಡಿದ್ದ. ಅಂಬಾನಿ ಅವರು, ತಾವು ಭಾರತ ಸರ್ಕಾರದ ಮಾರ್ಗದರ್ಶಕ ಎಂಬುದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಅದಾದ ನಂತರ ಅನಿಲ್ ಅಂಬಾನಿ ಅವರು, 'ಭಾರತದೊಂದಿಗಿನ ಸಂಬಂಧ ಮತ್ತು ರಕ್ಷಣಾ ಸಹಕಾರಕ್ಕಾಗಿ ಶ್ವೇತಭವನದೊಂದಿಗೆ ವ್ಯವಹರಿಸಲು ನಿಮ್ಮ ಮಾರ್ಗದರ್ಶನದ ಬೇಕಿದೆ' ಎಂದು ಎಪ್ಸ್ಟೈನ್ಗೆ ಪತ್ರ ಬರೆದಿದ್ದರು ಎಂಬ ಮಾಹಿತಿಯು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿದೆ.
ರಾಜತಾಂತ್ರಿಕ ಅಧಿಕಾರಿಗಳ ನೇಮಕವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಬ್ಬರ ನಡುವೆ ಮಾತುಕತೆಗಳು ನಡೆದಿದ್ದವು ಎಂಬುದೂ ಬಹಿರಂಗಗೊಂಡಿದೆ.
ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಎಪ್ಸ್ಟೈನ್
ಎಪ್ಸ್ಟೈನ್ಗೆ ಸಂಬಂಧಿಸಿದ 30 ಲಕ್ಷ ಪುಟಗಳ ದಾಖಲೆಗಳು, 1.8 ಲಕ್ಷ ಚಿತ್ರಗಳು, ಎರಡು ಸಾವಿರ ವಿಡಿಯೊಗಳನ್ನು ನ್ಯಾಯಾಂಗ ಇಲಾಖೆಯು ಜನವರಿ 30ರಂದು ಬಿಡುಗಡೆ ಮಾಡಿತ್ತು.
ಜಗತ್ತಿನ ವಿವಿಧ ಕ್ಷೇತ್ರಗಳ ಘಟಾನುಘಟಿ ನಾಯಕರಿಗೆ ಸಂಬಂಧಿಸಿದ ಮಾಹಿತಿಯೂ ಅವುಗಳಲ್ಲಿರುವುದು ಭಾರಿ ಸಂಚಲನ ಸೃಷ್ಟಿಸಿದೆ.
ಲೈಂಗಿಕ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2005ರಲ್ಲಿ ಮೊದಲ ಸಲ ಜೈಲು ಸೇರಿದ್ದ ಜೆಫ್ರಿ ಎಪ್ಸ್ಟೈನ್ ವಿರುದ್ಧದ ಆರೋಪಗಳು 2008ರಲ್ಲಿ ಸಾಬೀತಾಗಿದ್ದವು. ಆದಾಗ್ಯೂ, ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದ ಆತ, ಬಾಲಕಿಯರ ಕಳ್ಳಸಾಗಣೆ ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ 2019ರಲ್ಲಿ ಮತ್ತೆ ಜೈಲು ಪಾಲಾಗಿದ್ದ. ಆದರೆ, ವಿಚಾರಣೆಗೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದ.

