ನವದೆಹಲಿ: ಕಳೆದ ಜನವರಿಯಿಂದ ಆರಂಭವಾಗಿದ್ದ ಸಂಸತ್ತಿನ ಮಹತ್ವದ ಬಜೆಟ್ ಅಧಿವೇಶನ ಶನಿವಾರ ಮುಕ್ತಾಯಗೊಂಡಿದ್ದು, ಲೋಕಸಭೆ ಮತ್ತು ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಶನಿವಾರ ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಮಾರೋಪದ ಮಾತುಗಳನ್ನು ಆಡಿದರು.
ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು
ಮಹಿಳಾ ಮೀಸಲಾತಿ ತಿದ್ದುಪಡಿ ಕಾಯ್ದೆಗೆ ಲೋಕಸಭೆಯಲ್ಲಿ ಸೋಲುಂಟಾದ ಮರುದಿನವೇ ಅಧಿವೇಶನವನ್ನು ಮುಂದೂಡಿರುವುದು ಗಮನಾರ್ಹ. ಲೋಕಸಭೆ ಸ್ಥಾಗಳ ಹೆಚ್ಚಳ ಸೇರಿದಂತೆ ಮತ್ತೊಂದು ಮಸೂದೆಯನ್ನು ಸರ್ಕಾರ ಮತಕ್ಕೆ ಹಾಕಲಿಲ್ಲ.
ರಾಜ್ಯಸಭೆ: ಇತ್ತ ರಾಜ್ಯಸಭೆಯಲ್ಲಿ ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಈ ವಿಶೇಷ ಅಧಿವೇಶನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು ವಿಶೇಷ. ಈ ಕಲಾಪದಲ್ಲಿ ಹರಿವಂಶ ಅವರನ್ನು ರಾಜ್ಯಸಭೆಯ ಉಪಸಭಾಪತಿಯನ್ನಾಗಿ ಆಯ್ಕೆ ಮಾಡಲಾಯಿತು.
ಈ ಬಜೆಟ್ ಅಧಿವೇಶನ ದೇಶದ ಅಭಿವೃದ್ಧಿ ಪಥವನ್ನು ನಿರ್ಧರಿಸುವ ಅತ್ಯಂತ ದೀರ್ಘ ಮತ್ತು ಪರಿಣಾಮಕಾರಿ ಅಧಿವೇಶನವಾಗಿದೆ ಎಂದು ಸಭಾಪತಿಗಳು ಶ್ಲಾಘಿಸಿದರು.
ಮಹಿಳಾ ಮೀಸಲಾತಿ (ತಿದ್ದುಪಡಿ) ಮಸೂದೆ ಸೇರಿದಂತೆ ಪ್ರಮುಖ ಮೂರು ಕಾಯ್ದೆಗಳ ಚರ್ಚೆಗಾಗಿ ಏಪ್ರಿಲ್ 16 ರಿಂದ ಮೂರು ದಿನ ಸಂಸತ್ತಿನ ವಿಶೇಷ ಕಲಾಪವನ್ನು ಆಯೋಜಿಸಲಾಗಿತ್ತು. ಸದ್ಯಕ್ಕೆ ಎರಡೂ ಸದನಗಳ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ಈ ಬಾರಿಯ ಸುದೀರ್ಘ ಸಂಸದೀಯ ಪ್ರಕ್ರಿಯೆಗೆ ತೆರೆ ಎಳೆಯಲಾಗಿದೆ.

