ತಿರುವನಂತಪುರಂ (PTI): ಚರ್ಚ್ ಬೆಂಬಲಿತ ಮಲಯಾಳ ದಿನಪತ್ರಿಕೆ 'ದೀಪಿಕಾ', 'ರಾಜಕೀಯ ಅವಕಾಶವಾದಿಗಳನ್ನು' ಕಟುವಾಗಿ ಟೀಕಿಸಿ ಸಂಪಾದಕೀಯ ಬರೆದಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿಗೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ದಿನಪತ್ರಿಕೆಯು ಈ ತೀಕ್ಷ್ಣ ಸಂಪಾದಕೀಯವನ್ನು ಪ್ರಕಟಿಸಿದೆ.
ಈ ಸಂಪಾದಕೀಯಕ್ಕೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಹೇಳಿಕೆಗಳನ್ನು ಕಾಂಗ್ರೆಸ್ ಖಂಡಿಸಿದೆ.
'ಅಲ್ಪಸಂಖ್ಯಾತರ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ಮತ್ತು ಬೆದರಿಕೆಗಳ ನಡುವೆಯೂ ನಮ್ಮ ನಿಲುವು ಬದಲಾಗದು' ಎಂದು ದಿನಪತ್ರಿಕೆಯು ಹೇಳಿದೆ.
ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ಮತ್ತು ಅವರ ಪುತ್ರ ಶೋನ್ ಜಾರ್ಜ್ ಅವರು ಕೆಲ ಬಿಷಪ್‌ಗಳ ವಿರುದ್ಧ ಟೀಕೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
'ಕೆಲವು ರಾಜಕೀಯ ಅವಕಾಶವಾದಿಗಳುಎಫ್‌ಸಿಆರ್‌ಎ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದರೂ ನಮ್ಮ ನಿಲುವು ಬದಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದೆ. ಆದರೆ ಯಾವುದೇ ರಾಜಕೀಯ ಪಕ್ಷದ ನಾಯಕರ ಹೆಸರನ್ನು ಅದು ಉಲ್ಲೇಖಿಸಿಲ್ಲ. ಶೋನ್ ಜಾರ್ಜ್, 'ದಿನಪತ್ರಿಕೆಯ ನಿಲುವನ್ನು ಚರ್ಚ್‌ನ ನಿಲುವು ಎಂದು ಪರಿಗಣಿಸಲಾಗುವುದಿಲ್ಲ' ಎಂದು ಹೇಳಿದ್ದಾರೆ.

