ನವದೆಹಲಿ: ನೀಟ್ 2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿದಂತೆ ಕೆಲ ಕುತೂಹಲಕಾರಿ ಮತ್ತು ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿವೆ. ರಾಜಸ್ಥಾನದ ಸಿಕರ್ ಪ್ರದೇಶದಲ್ಲಿ ಭಾರಿ ಅಕ್ರಮದ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ. ಈ ಸಂಬಂಧ ಮೂವರನ್ನು ಸಿಬಿಐ ಬಂಧಿಸಿದೆ.
ಮೊದಲಿಗೆ ನೀಟ್ ಪ್ರಶ್ನೆ ಪತ್ರಿಕೆಯನ್ನು ಹೋಲುವ guess ಪ್ರಶ್ನೆಪತ್ರಿಕೆಯನ್ನು ಪಡೆದುಕೊಂಡು ಕೋಚಿಂಗ್ ಕೇಂದ್ರಗಳಿಗೆ ಆರೋಪಿಗಳು ಸರಬರಾಜು ಮಾಡಿದ್ದಾರೆ. ಅಲ್ಲಿಂದ ಅದು ಮತ್ತಷ್ಟು ಕಡೆ ಹರಡಿದೆ ಎಂದು ತಿಳಿದುಬಂದಿದೆ.
ಬಂಧಿತರಲ್ಲಿ ಸಹೋದರರಾದ ದಿನೇಶ್ ಬಿವಾಲ್, ಮಂಗಿಲಾಲ್ ಬಿವಾಲ್ ಮತ್ತು ಮಂಗಿಲಾಲ್ ಅವರ ಹಿರಿಯ ಮಗ ವಿಕಾಸ್ ಒಂದೇ ಕುಟುಂಬಕ್ಕೆ ಸೇರಿದವರು.
ಆರೋಪಿ ದಿನೇಶ್ ಮಗ ರಿಷಿ ಬಿವಾಲ್‌ಗಾಗಿ ಸಿಬಿಐ ಹುಡುಕಾಟ
ಆರೋಪಿ ದಿನೇಶ್ ಬಿವಾಲ್ ಮಗ ರಿಷಿ ಬಿವಾಲ್‌ಗಾಗಿಯೂ ಸಿಬಿಐ ಹುಡುಕಾಟ ನಡೆಸುತ್ತಿದೆ. ಏಕೆಂದರೆ, ಪರೀಕ್ಷೆಗೆ ಮುನ್ನ ಸೋರಿಕೆಯಾದ ಪ್ರಶ್ನೆ ಪತ್ರಿಕೆ ರಿಷಿ ಕೈಸೇರಿತ್ತು ಎನ್ನಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ದಿನೇಶ್ ಬಿವಾಲ್ ತಮ್ಮ ಮಗನಿಗಾಗಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪಡೆಯಲು ₹10 ಲಕ್ಷ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೂ, ಅವರ ಮಗ ನೀಟ್‌ನಲ್ಲಿ 720ಕ್ಕೆ 107 ಅಂಕಗಳನ್ನು ಮಾತ್ರ ಗಳಿಸಿದ್ದಾನೆ ಎಂದು ವರದಿಯಾಗಿದೆ. ವಿಚಾರಣೆಯ ಸಮಯದಲ್ಲಿ ದಿನೇಶ್, ರಿಷಿಗಾಗಿ ಪತ್ರಿಕೆ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾಭ್ಯಾಸದಲ್ಲಿ ಕಳಪೆ ಸಾಧನೆ
ದಿನೇಶ್ ಮಗ ರಿಷಿ ಬೋರ್ಡ್ ಪರೀಕ್ಷೆಗಳಲ್ಲಿ ಕಳಪೆ ಸಾಧನೆ ಮಾಡಿರುವುದು ಸಿಬಿಐ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. 10ನೇ ತರಗತಿಯಲ್ಲಿ ಶೇ 44ರಷ್ಟು ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ರಿಷಿ, 12ನೇ ತರಗತಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದನು ಎಂದು ತಿಳಿದುಬಂದಿದೆ.
ತನಿಖೆಯ ಸಮಯದಲ್ಲಿ ಪತ್ತೆಯಾದ ಅಂಕಪಟ್ಟಿಯ ಪ್ರಕಾರ, ರಿಷಿ ಬಿವಾಲ್ 12ನೇ ತರಗತಿಯ ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹಿರಿಯ ಮಾಧ್ಯಮಿಕ ಪರೀಕ್ಷೆ 2026ರಲ್ಲಿ ಗ್ರೇಸ್ ಅಂಕಗಳ ಸಹಾಯದಿಂದ ಶೇ 50.80 ರಷ್ಟು ಅಂಕಗಳನ್ನು ಪಡೆದು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.

