ನವದೆಹಲಿ: ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದ ಅನೇಕ ದೇಶಗಳು ಇದೀಗ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಲು ಪ್ರಾರಂಭಿಸಿವೆ. ಮುಖ್ಯವಾಗಿ, ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು, ಇಂಧನ ಬೆಲೆಗಳು ಮತ್ತು ದಿನ ಬಳಕೆಯ ವಸ್ತುಗಳ ದರದಲ್ಲಿ ಏರಿಕೆಗಳು ಆಯಾ ದೇಶದ ಜನತೆಯನ್ನು ಅಕ್ಷರಶಃ ಕಂಗಾಲಾಗಿಸಿದೆ.
ಈ ಮಧ್ಯೆ, ನಿನ್ನೆಯಷ್ಟೇ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು 3 ರೂ.ಗೆ ಹೆಚ್ಚಿಸಿದೆ.
ಪ್ರಸ್ತುತ, ಲೀಟರ್‌ಗೆ 3 ರೂ.ಗಳಷ್ಟು ಏರಿಕೆ ಮಾಡಿರುವ ಕೇಂದ್ರ ಸರ್ಕಾರ, ಇಲ್ಲಿಗೆ ಸುಮ್ಮನಾಗುವುದು ಡೌಟ್ ಎನ್ನಲಾಗಿದೆ. ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಇಂಧನ ದರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳ ನಿರಂತರ ಹೆಚ್ಚಳ ಎನ್ನಲಾಗಿದೆ.
ಅತಿ ಮುಖ್ಯವಾಗಿ ಹೊರ್ಮುಜ್ ಜಲಸಂಧಿಯಲ್ಲಿ ಪೂರೈಕೆ ಅಡಚಣೆಗಳ ಭೀತಿ, ಜಾಗತಿಕ ತೈಲ ಮಾರುಕಟ್ಟೆಗಳ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ಈ ಸಂದರ್ಭದಲ್ಲಿ, ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 110 ಡಾಲರ್ ತಲುಪಿದ ಹಿನ್ನೆಲೆ ಪೆಟ್ರೋಲ್-ಡಿಸೇಲ್ ಬೆಲೆಗಳ ಮೇಲಿನ ಒತ್ತಡ ಇನ್ನಷ್ಟೂ ಹೆಚ್ಚಾಗಿದೆ. ಈ ಹೊರೆಯನ್ನು ಇಷ್ಟು ದಿನಗಳ ಕಾಲ ಹೊತ್ತ ಕೇಂದ್ರ ಸರ್ಕಾರ, ಕೆಲವೇ ದಿನಗಳಲ್ಲಿ ಯುದ್ಧ ಒಂದು ಹಂತಕ್ಕೆ ಬರಬಹುದು ಎಂದು ನಿರೀಕ್ಷಿಸಿತ್ತು. ಆದರೆ, ಶಾಂತಿ ಒಪ್ಪಂದವನ್ನು ಎಡಗಾಲಿನಲ್ಲಿ ಒದ್ದ ಅಮೆರಿಕ, ಇರಾನ್ ಮೇಲಿನ ದಾಳಿಯನ್ನು ಮುಂದುವರಿಸಿರುವುದೇ ಸದ್ಯ ಬೆಲೆ ಏರಿಕೆಗೆ ದೊಡ್ಡ ಕಾರಣವಾಗಿದೆ.
4 ವರ್ಷಗಳ ಬಳಿಕ 'ಬಿಗ್' ಏರಿಕೆ!
ಸುಮಾರು ನಾಲ್ಕು ವರ್ಷಗಳ ನಂತರ, ಮೇ.15ರಂದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ 3 ರೂ.ನಷ್ಟು ಹೆಚ್ಚಿಸಲಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯ ಎನ್ನಲಾಗಿದೆ. ತಜ್ಞರ ಪ್ರಕಾರ, ಪ್ರಸ್ತುತ ಬೆಲೆ ಏರಿಕೆಯು ತೈಲ ಕಂಪನಿಗಳಿಗೆ ಕೊಂಚ ರಿಲೀಫ್ ತಂದಿದ್ದರೂ, ಅಂತಹ ಪರಿಹಾರ ನೀಡಿಲ್ಲ. ಮುಂದಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 90ರಿಂದ 100 ಡಾಲರ್ ಮೀರಿದರೆ, ಭವಿಷ್ಯದಲ್ಲಿ ಹೆಚ್ಚಿನ ಬೆಲೆ ಏರಿಕೆ ಅನಿವಾರ್ಯ ಎಂಬುದು ಗಮನಾರ್ಹ.
ಶೀಘ್ರವೇ 10 ರೂ. ಹೆಚ್ಚಳ?
ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡಿದ ಮಾಸ್ಟರ್ ಪೋರ್ಟ್‌ಫೋಲಿಯೋ ಸರ್ವೀಸಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಗುರ್ಮೀತ್ ಸಿಂಗ್ ಚಾವ್ಲಾ, ತೈಲ ಮಾರುಕಟ್ಟೆ ಕಂಪನಿಗಳು ಈಗಾಗಲೇ ತೀವ್ರ ಒತ್ತಡದಲ್ಲಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಇದೇ ಮಟ್ಟದಲ್ಲಿ ಮುಂದುವರಿದರೆ, ಮುಂಬರುವ ತಿಂಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಇನ್ನು ಚಾಯ್ಸ್ ಎನರ್ಜಿ ವಿಶ್ಲೇಷಕ ಧವಲ್ ಪೋಪಟ್ ಅವರ ಪ್ರಕಾರ, ಪ್ರತಿ ಲೀಟರ್‌ಗೆ 1 ರೂ. ಹೆಚ್ಚಳವು ಸಾರ್ವಜನಿಕ ವಲಯದ ತೈಲ ಕಂಪನಿಗಳ ಇಬಿಐಟಿಡಿಎಯನ್ನು ಸುಮಾರು 15,000ರಿಂದ 16,000 ರೂ. ಕೋಟಿಗಳಷ್ಟು ಸುಧಾರಿಸುವ ಸಾಧ್ಯತೆಯಿದೆ. ಪ್ರಸ್ತುತ, 3 ರೂಪಾಯಿ ಹೆಚ್ಚಳವು ವಾರ್ಷಿಕವಾಗಿ 45 ಸಾವಿರದಿಂದ 48,000 ಕೋಟಿ ರೂ.ಗಳವರೆಗೆ ಪರಿಹಾರವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಜಾಗತಿಕ ಕಚ್ಚಾ ತೈಲ ಬೆಲೆಗಳು ಪರಿಸ್ಥಿತಿಯನ್ನು ಅವಲಂಬಿಸಿ ಮತ್ತಷ್ಟು ಹೆಚ್ಚಾದರೆ, ಬೆಲೆಗಳು ಲೀಟರ್‌ಗೆ 10 ರೂ. ಹೆಚ್ಚಾದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.
ಹಣದುಬ್ಬರ ಅಪಾಯ?
ಇಂಧನ ಬೆಲೆಗಳ ಏರಿಕೆಯಿಂದ, ಹೆಚ್ಚಿದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ ಮತ್ತಷ್ಟು ಹಣದುಬ್ಬರದ ಅಪಾಯವಿದೆ. ತರಕಾರಿಗಳು, ಅಗತ್ಯ ವಸ್ತುಗಳು, ಡೈರಿ ಉತ್ಪನ್ನಗಳು ಮತ್ತು ನಿರ್ಮಾಣ ಸಾಮಗ್ರಿಗಳಂತಹ ಅನೇಕ ವಸ್ತುಗಳ ಬೆಲೆಗಳು ಹಂತ ಹಂತವಾಗಿ ಹೆಚ್ಚಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ. ಭವಿಷ್ಯದಲ್ಲಿ ಬೆಲೆ ಏರಿಕೆಯನ್ನು ಹತೋಟಿಗೆ ತರುವಲ್ಲಿ ಸರ್ಕಾರದ ಹಸ್ತಕ್ಷೇಪವು ಬಹುದೊಡ್ಡ ಪಾತ್ರ ವಹಿಸಲಿದೆ ಎಂದು ತಜ್ಞರು ವಿವರಿಸಿದ್ದಾರೆ.

