ಬೈರೂತ್: ಲೆಬನಾನ್‌ನಾದ್ಯಂತ ಇಸ್ರೇಲ್ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ಕಳೆದ ಒಂದು ವಾರದಲ್ಲಿ ದೇಶದಲ್ಲಿ ಪ್ರತಿದಿನ ಸರಾಸರಿ 11 ಮಕ್ಕಳು ಇಸ್ರೇಲ್ ದಾಳಿಗೆ ಬಲಿ ಇಲ್ಲವೇ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ.
ದಕ್ಷಿಣ ಲೆಬನಾನ್‌ನ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಬುಧವಾರ ಮತ್ತು ಗುರುವಾರ ಇಸ್ರೇಲ್ ಪಡೆಗಳು ಭೀಕರ ಬಾಂಬ್ ದಾಳಿ ನಡೆಸಿವೆ. ಗುರುವಾರ ಬೈರೂತ್‌ನ ದಕ್ಷಿಣ ಉಪನಗರದಲ್ಲಿರುವ ವಸತಿ ಕಟ್ಟಡವೊಂದನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.
ಯುನಿಸೆಫ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಕಳೆದ ಏಳು ದಿನಗಳಲ್ಲಿ ಒಟ್ಟು 77 ಮಕ್ಕಳು ದಾಳಿಗೆ ತುತ್ತಾಗಿದ್ದಾರೆ. ಇನ್ನು ಏಪ್ರಿಲ್‌ನಲ್ಲಿ ಕದನ ವಿರಾಮ ಘೋಷಣೆಯಾದ ನಂತರದ ದಿನಗಳಿಂದ ಈವರೆಗೆ ಸುಮಾರು 55 ಮಕ್ಕಳು ಸಾವನ್ನಪ್ಪಿದ್ದು, 212 ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮಕ್ಕಳ ಮೇಲಾಗುತ್ತಿರುವ ಈ ಭೀಕರ ಪರಿಣಾಮವನ್ನು ಯುನಿಸೆಫ್ ವಕ್ತಾರ ರಿಕಾರ್ಡೊ ಪೈರೆಸ್ 'ಅತ್ಯಂತ ಆಘಾತಕಾರಿ ಮತ್ತು ದಿಗ್ಭ್ರಮೆ ಮೂಡಿಸುವಂಥದ್ದು' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

