ಮುಂಬೈ: ಸೈಪ್ರಸ್ ಮೂಲದ ಬೆಟ್ಟಿಂಗ್ ವೇದಿಕೆ ಪರಿಮ್ಯಾಚ್‌ಗೆ ಸಂಬಂಧಿಸಿ, ಆರು ರಾಜ್ಯಗಳ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ನಡೆಸಿದೆ.
'ಬೆಟ್ಟಿಂಗ್ ಮೂಲಕ 'ಪರಿಮ್ಯಾಚ್' ವರ್ಷದೊಳಗೆ ₹3 ಸಾವಿರ ಕೋಟಿ ಹಣ ಗಳಿಸಿದೆ' ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ವೇಳೆ ₹1.2 ಕೋಟಿ ನಗದು ಜಪ್ತಿ ಮಾಡಿ, ₹3.8 ಕೋಟಿ ಹಣವಿದ್ದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ₹112 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಆನ್‌ಲೈನ್ ಬೆಟ್ಟಿಂಗ್ ಮೂಲಕ ಗ್ರಾಹಕರಿಗೆ ವಂಚಿಸಿರುವ ಆರೋಪದಡಿ ಪರಿಮ್ಯಾಚ್.ಕಾಮ್ ವಿರುದ್ಧ ಮುಂಬೈ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆಧಾರದಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್, ದಮನ್ ಮತ್ತು ಉತ್ತರ ಪ್ರದೇಶಗಳಲ್ಲಿ ಶೋಧ ನಡೆದಿದೆ.
'ಗ್ರಾಹಕರಿಂದ ಹಣ ಸಂಗ್ರಹ ಮತ್ತು ವರ್ಗಾವಣೆಗಳಿಗಾಗಿ ಪರಿಮ್ಯಾಚ್ ಮತ್ತು ಅದರ ಪಾಲುದಾರರು ನಕಲಿ ಬ್ಯಾಂಕ್ ಖಾತೆ, ಮಧ್ಯವರ್ತಿ ಪಾವತಿ ವ್ಯವಸ್ಥೆ ಸೇರಿದಂತೆ ಸಂಕೀರ್ಣ ಜಾಲವನ್ನು ಅಳವಡಿಸಿಕೊಂಡಿದ್ದರು. ಸಾಫ್ಟ್‌ವೇರ್, ಫಿನ್‌ಟೆಕ್ ಮತ್ತು ತಂತ್ರಜ್ಞಾನ ಸಂಬಂಧಿತ ಸಂಸ್ಥೆಗಳ ಹೆಸರಲ್ಲಿ ತೆರೆಯಲಾಗಿದ್ದ ಖಾತೆಗಳನ್ನು ಪರಿಮ್ಯಾಚ್ ಬಳಸಿಕೊಂಡಿತ್ತು' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಬ್ಯಾಂಕ್ ಪ್ರತಿನಿಧಿಗಳ(ಬಿಸಿ) ಜಾಲ, ಗ್ರಾಹಕ ಸೇವಾ ಕೇಂದ್ರ, ಆರ್ಥಿಕ ನಿರ್ವಹಣಾ ಸೇವೆ, ಸ್ಥಳೀಯ ಕಿರಾಣಿ ಅಂಗಡಿ ಮತ್ತು ಮೊಬೈಲ್ ಹಣ ವರ್ಗಾವಣೆ ಏಜೆಂಟ್‌ಗಳ ಮೂಲಕ ಹಣ ವರ್ಗಾವಣೆಯನ್ನು ನಡೆಸಲಾಗುತ್ತಿತ್ತು' ಎಂದು ಇ.ಡಿ ತಿಳಿಸಿದೆ.
'ದೇಶದಲ್ಲಿ ಅಕ್ರಮ ಬೆಟ್ಟಿಂಗ್ ಜಾಲಗಳು ವ್ಯವಸ್ಥಿತವಾಗಿ ಬೆಳೆಯುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ' ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

