ಭೋಪಾಲ್: ರೂಪದರ್ಶಿ ಹಾಗೂ ನಟಿ ತ್ವಿಶಾ ಶರ್ಮಾ ಸಾವಿಗೆ ಸಂಬಂಧಿಸಿದಂತೆ ಆಕೆಯ ಅತ್ತೆ ಹಾಗೂ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ರನ್ನು ಸಿಬಿಐ 20 ಪ್ರಮುಖ ಪ್ರಶ್ನೆಗಳನ್ನು ಕೇಳಿದೆ ಎಂದು ndtv.com ವರದಿ ಮಾಡಿದೆ.
ಈ ಪ್ರಶ್ನೆಗಳು ಸಾಕ್ಷ್ಯ ನಾಶ, ಗರ್ಭಧಾರಣೆಗೆ ಸಂಬಂಧಿಸಿದ ಒತ್ತಡ ಮತ್ತು ತ್ವಿಶಾ ಶರ್ಮಾ ಅವರ ದೇಹದ ಮೇಲೆ ಕಂಡುಬಂದ ಗಾಯಗಳನ್ನು ಕೇಂದ್ರೀಕರಿಸಿದ್ದವು ಎನ್ನಲಾಗಿದೆ.
ಗಿರಿಬಾಲಾ ಸಿಂಗ್ ರನ್ನು ಮೂರು ದಿನಗಳ ಕಾಲ ಸುಮಾರು 10 ಗಂಟೆಗಳವರೆಗೆ ವಿಚಾರಣೆಗೊಳಪಡಿಸಿದ್ದ ಸಿಬಿಐ, ಸ್ಥಳ ಪರಿಶೀಲನೆ, ವಿಧಿವಿಜ್ಞಾನ ನಕ್ಷೆ ಹಾಗೂ ಡಿಜಿಟಲ್ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಅವರನ್ನು ಗುರುವಾರ ಭೋಪಾಲ್‌ನಲ್ಲಿ ಬಂಧಿಸಿದೆ. ಈಗಾಗಲೇ ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ಸಿಂಗ್ ಪೊಲೀಸರ ವಶದಲ್ಲಿದ್ದಾರೆ.
ಮೇ 15ರಂದು ಗಿರಿಬಾಲಾ ಸಿಂಗ್‌ಗೆ ಭೋಪಾಲ್ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದ ಒಂದು ದಿನದ ಬಳಿಕ ಈ ಬಂಧನ ನಡೆದಿದೆ. ಬೆಳಿಗ್ಗೆ ಸುಮಾರು 10.30ಕ್ಕೆ ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ತೆರಳಿದ ಸಿಬಿಐ ತಂಡ, ಸಂಜೆ ಸುಮಾರು 5.10ಕ್ಕೆ ಅವರನ್ನು ಅಧಿಕೃತವಾಗಿ ಬಂಧಿಸುವುದಕ್ಕೂ ಮುನ್ನ ಹಲವಾರು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿತು.
ಈ ವೇಳೆ ತ್ವಿಶಾ ಶರ್ಮಾ ಅವರ ಗರ್ಭಧಾರಣೆ ಮತ್ತು ಅವರ ಮೃತದೇಹದ ಮೇಲೆ ಕಂಡುಬಂದಿದ್ದ ಗಾಯಗಳು ಸೇರಿದಂತೆ ಪ್ರಕರಣದ ಹಲವು ಆಯಾಮಗಳ ಕುರಿತು ಗಿರಿಬಾಲಾ ಸಿಂಗ್‌ರನ್ನು ವಿಚಾರಣೆಗೊಳಪಡಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ndtv.com ವರದಿ ಮಾಡಿದೆ.

