ಮಹಬೂಬಾಬಾದ್: ಉದ್ಯೋಗ ಖಾತ್ರಿ ಯೋಜನೆಯಡಿ ಹಾಜರಾತಿ ದಾಖಲಿಸಲು ಬಳಸಲಾಗುತ್ತಿರುವ ಫೇಸ್ ರೆಕಗ್ನಿಷನ್ ವ್ಯವಸ್ಥೆಯು ತಲೆ ಬೋಳಿಸಿಕೊಂಡಿದ್ದ ಕೂಲಿ ಕಾರ್ಮಿಕನನ್ನು ಗುರುತಿಸಲು ವಿಫಲವಾದ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ ಮಂಡಲದ ಕೋಮಟಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮಲ್ಯಾಲ ಶ್ರೀನಿವಾಸ್ ಎಂಬ ಕೂಲಿ ಕಾರ್ಮಿಕ ದೇವಾಲಯವೊಂದರಲ್ಲಿ ಮುಡಿ ಕೊಟ್ಟ ಬಳಿಕ ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಹಾಜರಾಗಿದ್ದರು. ಹಾಜರಾತಿ ದಾಖಲಿಸುವ ವೇಳೆ ಕ್ಷೇತ್ರ ಕಾರ್ಯ ಸಹಾಯಕರು ಫೇಸ್ ರೆಕಗ್ನಿಷನ್ ಆಯಪ್ ಮೂಲಕ ಅವರ ಮುಖವನ್ನು ಹಲವು ಬಾರಿ ಸ್ಕ್ಯಾನ್ ಮಾಡಲು ಪ್ರಯತ್ನಿಸಿದರೂ ವ್ಯವಸ್ಥೆಯು ಅವರನ್ನು ಗುರುತಿಸಲಿಲ್ಲ.
ತಲೆಯಲ್ಲಿ ಕೂದಲು ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಿದ ಮಹಿಳಾ ಕ್ಷೇತ್ರ ಕಾರ್ಯ ಸಹಾಯಕಿ, ತಮ್ಮ ಜಡೆಯನ್ನು ಶ್ರೀನಿವಾಸ್ ಅವರ ತಲೆಯ ಮೇಲೆ ಇರಿಸಿ ಮತ್ತೊಮ್ಮೆ ಸ್ಕ್ಯಾನ್ ನಡೆಸಿದರು. ಈ ಬಾರಿ ಫೇಸ್ ರೆಕಗ್ನಿಷನ್ ಆಯಪ್ ಅವರನ್ನು ಯಶಸ್ವಿಯಾಗಿ ಗುರುತಿಸಿ ಹಾಜರಾತಿಯನ್ನು ದಾಖಲಿಸಿತು.
ಈ ಘಟನೆ ಸ್ಥಳದಲ್ಲಿದ್ದ ಇತರ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ನಗೆ ಮೂಡಿಸಿತು. ಜಡೆ ಇಟ್ಟು ಸ್ಕ್ಯಾನ್ ಮಾಡಿದ ಬಳಿಕವೇ ಹಾಜರಾತಿ ದಾಖಲಾಗಿರುವ ದೃಶ್ಯವನ್ನು ಕಂಡು ಹಲವರು ಬಿದ್ದು ಬಿದ್ದು ನಕ್ಕರು.
ಉದ್ಯೋಗ ಖಾತ್ರಿ ಯೋಜನೆಯಡಿ ಹಾಜರಾತಿ ದಾಖಲಿಸಲು ಬಳಸಲಾಗುತ್ತಿರುವ ಫೇಸ್ ರೆಕಗ್ನಿಷನ್ ವ್ಯವಸ್ಥೆಯ ಮಿತಿಗಳತ್ತ ಈ ಘಟನೆ ಗಮನ ಸೆಳೆದಿದೆ.

