HEALTH TIPS

NEET-UG ಮರುಪರೀಕ್ಷೆಗೆ ವಾಯುಪಡೆಯ ನೆರವು?; ಕಾರಣಗಳೇನು?

ಯಾವುದೇ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಲೋಪದೋಷಗಳಿಗೆ ಆಸ್ಪದ ನೀಡದಂತೆ 'ನೀಟ್-ಯುಜಿ' ಮರುಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಪ್ರಧಾನಮಂತ್ರಿ ಕಾರ್ಯಾಲಯವೇ ನೇರವಾಗಿ ಈ ಪರೀಕ್ಷಾ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದು, ಇದೀಗ ಶಿಕ್ಷಣ ಸಚಿವಾಲಯವು ಹಿಂದೆಂದೂ ಕಾಣದ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಪ್ರಶ್ನೆಪತ್ರಿಕೆಗಳ ಸಾಗಣೆ ಮತ್ತು ವಿತರಣೆಯ ಜವಾಬ್ದಾರಿಯನ್ನು ರಕ್ಷಣಾ ಪಡೆಗಳಿಗೆ ವಹಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಅದೇ ವೇಳೆ ದೇಶದಲ್ಲಿ ಒಂದು ಪರೀಕ್ಷೆಯನ್ನು ನ್ಯಾಯಸಮ್ಮತವಾಗಿ ನಡೆಸುವುದು ಇಷ್ಟೊಂದು ಕಠಿಣ ಸವಾಲಾಗಿ ಪರಿಣಮಿಸಿದೆಯೇ? ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದೆ.

ಕಳೆದ ಮೇ 3 ರಂದು ನಡೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದಾಗಿ ರದ್ದಾಗಿತ್ತು. ಇದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 23 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಇದೀಗ ಜೂನ್ 21 ರಂದು ಮರುಪರೀಕ್ಷೆ ನಿಗದಿಯಾಗಿದೆ. ಈ ಇಡೀ ವಿವಾದದ ಕೇಂದ್ರಬಿಂದುವಾಗಿರುವುದು 'ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)'. ನೀಟ್ ಪರೀಕ್ಷೆ ಸೇರಿದಂತೆ ದೇಶದ ಪ್ರಮುಖ ಕೇಂದ್ರ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಇದರದ್ದೇ ಆಗಿದೆ. ಇದುವರೆಗೆ ನಡೆದಿರುವ ತನಿಖೆಯ ಪ್ರಕಾರ, ಮುದ್ರಣಾಲಯದಿಂದ ಹಿಡಿದು ಪರೀಕ್ಷಾ ಕೇಂದ್ರ ತಲುಪುವವರೆಗಿನ ಪ್ರಶ್ನೆಪತ್ರಿಕೆಯ ಪಯಣದಲ್ಲಿ ಹಲವು ಕಡೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಈ ಭದ್ರತಾ ಲೋಪವನ್ನು ಸರಿಪಡಿಸಲು ಸರ್ಕಾರ ರಕ್ಷಣಾ ಪಡೆಗಳ ಮೊರೆ ಹೋಗಲು ಮುಂದಾಗಿದೆ.

ರಕ್ಷಣಾ ಪಡೆಗಳನ್ನು ಬಳಸುತ್ತಿರುವುದೇಕೆ?:

ಪಿಟಿಐ ವರದಿ ಪ್ರಕಾರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಪ್ರಸ್ತಾಪದ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಈ ನಿರ್ಣಾಯಕ ಸಭೆಯಲ್ಲಿ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ವರದಿಯ ಪ್ರಕಾರ ಮುದ್ರಣಾಲಯದಿಂದ ದೇಶದ ವಿವಿಧ ಭಾಗಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ನೀಟ್-ಯುಜಿ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಸಾಗಿಸುವ ಜವಾಬ್ದಾರಿಯನ್ನು ಭಾರತೀಯ ವಾಯುಪಡೆಗೆ ವಹಿಸಲಾಗುತ್ತದೆ. ಇದರೊಂದಿಗೆ, ಜೂನ್ ತಿಂಗಳಿನಲ್ಲಿ ಮಳೆ ಮತ್ತು ಹವಾಮಾನ ವೈಪರೀತ್ಯದ ಸಾಧ್ಯತೆಗಳಿರುವುದರಿಂದ, ಇಂತಹ ಸೂಕ್ಷ್ಮ ದಾಖಲೆಗಳನ್ನು ವಾಯುಪಡೆಯ ಮೂಲಕ ಸಾಗಿಸುವುದೇ ಅತ್ಯಂತ ಸುರಕ್ಷಿತ ಮಾರ್ಗ ಎಂದು ಸರ್ಕಾರ ಭಾವಿಸಿದೆ.

ನೀಟ್ ಪರೀಕ್ಷೆಯನ್ನು ನಡೆಸುವ ವಿಧಾನದಲ್ಲೇ ಪ್ರಮುಖ ಸಮಸ್ಯೆಯಿದೆ. ಕಂಪ್ಯೂಟರ್ ಆಧಾರಿತವಾಗಿ ನಡೆಯುವ ಜೆಇಇ (JEE) ಪರೀಕ್ಷೆಯಂತಲ್ಲದೆ, ನೀಟ್ ಇನ್ನೂ ಹಳೆಯ 'ಪೆನ್ ಮತ್ತು ಪೇಪರ್' ಮಾದರಿಯಲ್ಲೇ ನಡೆಯುತ್ತಿದೆ. ಇದುವರೆಗೆ ಪ್ರಶ್ನೆಪತ್ರಿಕೆಗಳನ್ನು ಅಂಚೆ ಇಲಾಖೆಯ ಮೂಲಕ ಸಾಗಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಹಲವು ಹಂತದ ವರ್ಗಾವಣೆಗಳು ಮತ್ತು ಅಧಿಕಾರಿಗಳ ಹಸ್ತಕ್ಷೇಪವಿರುತ್ತಿತ್ತು. ಸರಳವಾಗಿ ಹೇಳುವುದಾದರೆ ಮಾನವ ಹಸ್ತಕ್ಷೇಪಕ್ಕೆ ಇಲ್ಲಿ ಅವಕಾಶವಿತ್ತು.

ಪರೀಕ್ಷಾ ಪ್ರಕ್ರಿಯೆಯಲ್ಲಿ ರಕ್ಷಣಾ ಪಡೆಗಳನ್ನು ಬಳಸಿಕೊಳ್ಳುತ್ತಿರುವುದು ಎನ್‌ಟಿಎ ಅಧಿಕಾರಿಗಳು, ಪೊಲೀಸ್ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನೊಳಗೊಂಡ ನಾಗರಿಕ ಆಡಳಿತ ವ್ಯವಸ್ಥೆ ಮೇಲಿನ ತೀವ್ರ ಅಪನಂಬಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇ 3ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯು, ಅಂಚೆ ಸಾಗಣೆಯ ಹಂತವೇ ಅತ್ಯಂತ ದುರ್ಬಲ ಮತ್ತು ಸೂಕ್ಷ್ಮ ಜಾಗವಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿದೆ.

ದೇಶದ ಭದ್ರತೆ ಮತ್ತು ಗಡಿ ರಕ್ಷಣೆಯ ಜವಾಬ್ದಾರಿ ಹೊಂದಿರುವ ರಕ್ಷಣಾ ಪಡೆಗಳು, ಇಂದು ಪರೀಕ್ಷಾ ಪತ್ರಿಕೆಗಳ ರಕ್ಷಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ದಂಧೆಕೋರರ ಜಾಲವನ್ನು ಮಟ್ಟ ಹಾಕುವಲ್ಲಿ ನಮ್ಮ ಪೊಲೀಸ್ ಮತ್ತು ಇತರ ತನಿಖಾ ಸಂಸ್ಥೆಗಳು ಎಷ್ಟು ಘೋರವಾಗಿ ವಿಫಲವಾಗಿವೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿಯಾಗಿದೆ.

ಸರ್ಕಾರದ ನಡೆ ಪ್ರಶ್ನಿಸಿದ ತಜ್ಞರು:

"ಈ ನಿರ್ಧಾರಕ್ಕೆ ಬರಲು ದೇಶದಲ್ಲಿರುವ ಎಲ್ಲಾ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲವಾಗಿವೆಯೇ? ಅಪರಾಧಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗದಿದ್ದರೆ, ವ್ಯವಸ್ಥೆಯು ಭ್ರಷ್ಟಾಚಾರಕ್ಕೆ ಒಗ್ಗಿಕೊಂಡುಬಿಡುತ್ತದೆ. ನೀಟ್ ವಿಷಯದಲ್ಲಿ ಆಗುತ್ತಿರುವುದು ಕೂಡಾ ಇದೇ" ಎಂದು ನಿವೃತ್ತ ಮೇಜರ್ ಜನರಲ್ ರಾಜು ಚೌಹಾಣ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭೌಗೋಳಿಕ ರಾಜಕೀಯ ತಜ್ಞ ರೋಹಿತ್ ವಾಟ್ಸ್ ಅವರ ಪ್ರಕಾರ, ವಾಯುಪಡೆಯನ್ನು ಇದರಲ್ಲಿ ಬಳಸಿಕೊಳ್ಳುತ್ತಿರುವುದು ಕೇವಲ ಮೇಲ್ನೋಟದ ಪ್ರದರ್ಶನವಷ್ಟೇ. ಏಕೆಂದರೆ ಸಾರ್ವಜನಿಕರಿಗೆ ಸೇನಾ ಪಡೆಗಳ ಮೇಲಿರುವ ನಂಬಿಕೆ ಅಂತಹದ್ದು. ರಕ್ಷಣಾ ಪಡೆಗಳನ್ನು ಇಂತಹ ಕೆಲಸಕ್ಕೆ ಬಳಸಿಕೊಳ್ಳುವುದು ಒಂದು ಮೂರ್ಖತನದ ನಡೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಷಯವಾಗಿ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸರ್ಕಾರದ ಸಂಭವನೀಯ ನಡೆಯನ್ನು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. "ಸೇನೆಯು ಮುದ್ರಣ ಕೇಂದ್ರದಿಂದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಳ್ಳುತ್ತದೆ. ಬುಲೆಟ್ ಪ್ರೂಫ್ ವಾಹನಗಳು ಅವುಗಳನ್ನು ಹತ್ತಿರದ ವಾಯುನೆಲೆಗೆ ಕೊಂಡೊಯ್ಯುತ್ತವೆ. ನಂತರ ಐಎಎಫ್ ಈ ಪ್ರಶ್ನೆ ಪತ್ರಿಕೆಗಳನ್ನು ಎಲ್ಲಾ ಕೇಂದ್ರಗಳಿಗೆ ವಿಮಾನದ ಮೂಲಕ ತೆಗೆದುಕೊಂಡು ಹೋಗುತ್ತದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನಿಂಗ್ ಮಾಡಲು ಮತ್ತು ಸರ್ವರ್‌ಗಳಿಗೆ ಅಪ್‌ಲೋಡ್ ಮಾಡಲು ನೌಕಾಪಡೆಯ ಜಲಾಂತರ್ಗಾಮಿಗಳನ್ನು ಬಳಸೋಣ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ನೀಟ್ ಪರೀಕ್ಷೆಯ ವೈಫಲ್ಯದ ಜವಾಬ್ದಾರಿಯನ್ನು ಹೊತ್ತಿರುವ ಸಚಿವ ಧರ್ಮೇಂದ್ರ ಪ್ರಧಾನ್, ಮುಂಬರುವ ಮರುಪರೀಕ್ಷೆಗಾಗಿ ಸರ್ಕಾರವು "ಶೂನ್ಯ-ನಂಬಿಕೆ, ನಿರಂತರ ತಪಾಸಣೆ" ನೀತಿಯನ್ನು ಅನುಸರಿಸಲಿದೆ ಎಂದು ಹೇಳಿದ್ದಾರೆ.

►ಪರೀಕ್ಷಾ ಪ್ರಕ್ರಿಯೆ ಹೀಗಿರುತ್ತದೆ

ಪರೀಕ್ಷಾ ಪ್ರಕ್ರಿಯೆಯಲ್ಲಿ ರಕ್ಷಣಾ ಪಡೆಗಳನ್ನು ಒಳಗೊಳ್ಳುವ ನಿರ್ಧಾರದ ಹಿಂದೆ ನಂಬಿಕೆಯ ಕೊರತೆಯೇ ಪ್ರಮುಖ ಕಾರಣವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು, ಪರೀಕ್ಷಾ ಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು, ಮುದ್ರಣಾಲಯ ಮತ್ತು ಪರೀಕ್ಷಾ ಕೇಂದ್ರದವರೆಗಿನ ಹಂತಗಳನ್ನು ನಾವು ಗಮನಿಸಬೇಕಾಗುತ್ತದೆ.

ಮೇ 3ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಮುದ್ರಣಾಲಯದಿಂದಲೇ ನೇರವಾಗಿ ಆರಂಭವಾಗಿದೆ ಎಂದು ನಂಬಲಾಗಿದೆ. ಈ ಪ್ರಕರಣದಲ್ಲಿ ಬಂಧಿತನಾದ ಮೊದಲ ಆರೋಪಿ ಶುಭಂ ಖೈರ್ನಾರ್ , ಪುಣೆಯ ವ್ಯಕ್ತಿಯೊಬ್ಬರಿಂದ ಈ ಪ್ರಶ್ನೆ ಪತ್ರಿಕೆ ಪಡೆದಿದ್ದಾಗಿಯೂ, ಆ ವ್ಯಕ್ತಿಗೆ "ಎನ್‌ಟಿಎ ಮೂಲ"ಗಳಿಂದ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು ಎಂದು ಹೇಳಿರುವುದಾಗಿ ಸಿಬಿಐ ಈ ತಿಂಗಳ ಆರಂಭದಲ್ಲಿ ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಪ್ರಸ್ತುತ, ಸೀಮಿತ ಸಿಬ್ಬಂದಿ ಹೊಂದಿರುವ ಎನ್‌ಟಿಎ, ತನ್ನ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆಗೆ ನೀಡುತ್ತದೆ. ಇದು ಪ್ರಶ್ನೆ ಪತ್ರಿಕೆ ಸೋರಿಕೆ ಆಗುವ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ವಾಸ್ತವವಾಗಿ, 2024 ರಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರಕಾರ, ಎನ್‌ಟಿಎ ಕೇವಲ 22 ನಿಯೋಜಿತ ನೌಕರರು, 38 ಗುತ್ತಿಗೆ ಸಿಬ್ಬಂದಿ ಮತ್ತು 138 ಹೊರಗುತ್ತಿಗೆ ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಗುತ್ತಿಗೆ ಸಿಬ್ಬಂದಿ ಮತ್ತು ಹೊರಗುತ್ತಿಗೆ ವ್ಯವಸ್ಥೆಯ ಮೇಲಿನ ಇಂತಹ ಅತಿಯಾದ ಅವಲಂಬನೆಯು ಭದ್ರತೆಯನ್ನು ದುರ್ಬಲಗೊಳಿಸುತ್ತದೆ. ಇದೇ ಕಾರಣಕ್ಕಾಗಿ, ಉದ್ಭವಿಸಿರುವ ಭದ್ರತಾ ಲೋಪವನ್ನು ಸರಿಪಡಿಸಲು ರಕ್ಷಣಾ ಪಡೆಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.

►ನೀಟ್ ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಸಾಗಣೆ ಹೇಗೆ ನಡೆಯುತ್ತದೆ?

ಪರಿಣಿತರ ರಹಸ್ಯ ಸಮಿತಿಯೊಂದು ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ ನಂತರ, ಅದನ್ನು ಆಯ್ದ ಮುದ್ರಣಾಲಯಗಳಿಗೆ ಕಳುಹಿಸಲಾಗುತ್ತದೆ. ಉನ್ನತ ಮಟ್ಟದ ಆಡಿಟ್‌ಗಳು ಮತ್ತು ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳ ನಂತರವೇ ಈ ಮುದ್ರಣಾಲಯಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಎನ್‌ಟಿಎ ಅಧಿಕಾರಿಗಳ ಕಠಿಣ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ.

ಮುದ್ರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಒಂದು ವರ್ಷದವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಲಾಗುತ್ತದೆ.

ಮುದ್ರಣಾಲಯದ ಒಳಗೆ ಅತ್ಯಂತ ಕಡಿಮೆ ಸಂಖ್ಯೆಯ ಆಪರೇಟರ್‌ಗಳಿಗೆ ಮಾತ್ರ ಪ್ರವೇಶವಿರುತ್ತದೆ. ಇಷ್ಟೇ ಅಲ್ಲದೆ, ಮುದ್ರಣ ಪ್ರಕ್ರಿಯೆಯ ಉಸ್ತುವಾರಿ ವಹಿಸಿರುವ ಎನ್‌ಟಿಎ ಅಧಿಕಾರಿಗಳಿಗೂ ಸಹ ಪೇಪರ್ ಮುದ್ರಣವಾಗುವ ಸಮಯದಲ್ಲಿ ಮೊಬೈಲ್ ಫೋನ್ ಕೊಂಡೊಯ್ಯಲು ಅನುಮತಿ ಇರುವುದಿಲ್ಲ.

ಮುದ್ರಣ ಕಾರ್ಯ ಮುಗಿದ ನಂತರ, ಪ್ರಶ್ನೆಪತ್ರಿಕೆಗಳನ್ನು ಬ್ಯಾಂಕ್‌ಗಳ ಸುರಕ್ಷಿತ ಲಾಕರ್‌ಗಳಿಗೆ ಸಾಗಿಸಲಾಗುತ್ತದೆ.ಅಲ್ಲಿಂದ ವಿವಿಧ ರಾಜ್ಯಗಳ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಮೇ 3 ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ದೇಶಾದ್ಯಂತ 5,000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆಸಲಾಗಿತ್ತು.

ಪ್ರಶ್ನೆಪತ್ರಿಕೆಗಳ ಸಾಗಣೆ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತವು ಭಾಗಿಯಾಗಿರುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಇದರ ಉಸ್ತುವಾರಿ ವಹಿಸಿರುತ್ತಾರೆ. ಜಿಪಿಎಸ್ ಅಳವಡಿಸಲಾಗಿರುವ ವಾಹನಗಳಲ್ಲಿ, ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲಾಗುತ್ತದೆ.

ಮೇ 3 ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಮುಂದಿರುವ ಪ್ರಮುಖ ಪ್ರಶ್ನೆಯೆಂದರೆ, ಈ ಸೋರಿಕೆಯು ಪ್ರಶ್ನೆಪತ್ರಿಕೆ ಸಾಗಣೆಯ ಹಂತದಲ್ಲಿ ಆಗಿದೆಯೇ ಅಥವಾ ಮುದ್ರಣದ ಹಂತದಲ್ಲೇ ನಡೆದಿದೆಯೇ ಎಂಬುದು. ಇಂತಹ ಎಲ್ಲಾ ರೀತಿಯ ಅಪಾಯಗಳನ್ನು ಸಂಪೂರ್ಣವಾಗಿ ತಡೆಯಲು, ಸರ್ಕಾರವು ಅಂತಿಮವಾಗಿ ರಕ್ಷಣಾ ಪಡೆಗಳ ಮೊರೆ ಹೋಗಲು ನಿರ್ಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries