ಸಿಪಿಎಂ ನಾಯಕಿ ಬೃಂದಾ ಕಾರಟ್ ಹಾಗೂ ಕೆ.ಎಂ. ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, "ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಯಾವುದೇ ಅಪರಾಧ ನಡೆದಿರುವುದು ಕಂಡುಬಂದಿಲ್ಲ" ಎಂದು ಹೇಳಿದೆ.
ಪೀಠವು ದೆಹಲಿ ಹೈಕೋರ್ಟ್ ನೀಡಿದ್ದ ಅಭಿಪ್ರಾಯವನ್ನೂ ಎತ್ತಿಹಿಡಿದು, ಬಿಜೆಪಿ ನಾಯಕರ ಹೇಳಿಕೆಗಳು ಕೋಮು ಹಿಂಸಾಚಾರ ಅಥವಾ ಸಾರ್ವಜನಿಕ ಶಾಂತಿ ಭಂಗಕ್ಕೆ ಪ್ರಚೋದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ಉಲ್ಲೇಖಿಸಿದಂತೆ, 2020ರ ಜನವರಿ 27ರಂದು ಅನುರಾಗ್ ಠಾಕೂರ್ ರ‍್ಯಾಲಿಯಲ್ಲಿ "ದೇಶ್ ಕೆ ಗದ್ದಾರೋಂ ಕೋ" ಎಂಬ ಘೋಷಣೆ ಕೂಗಿದ ಬಳಿಕ "ಗೋಲಿ ಮಾರೋ ಸಾಲೋಂ ಕೋ" ಎಂದು ಪ್ರತಿಕ್ರಿಯಿಸಲು ಜನರನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ.
ಇದೇ ವೇಳೆ, 2020ರ ಜನವರಿ 28ರಂದು ಬಿಜೆಪಿ ಪರ ಪ್ರಚಾರದ ವೇಳೆ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಶಾಹೀನ್ ಬಾಗ್ ನಲ್ಲಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಬಲಪ್ರಯೋಗ ಮಾಡುವುದಾಗಿ ಅವರು ನೀಡಿದ ಸಂದರ್ಶನವನ್ನೂ ಉಲ್ಲೇಖಿಸಲಾಗಿದೆ.
ಅರ್ಜಿದಾರರು ಮೊದಲಿಗೆ ಈ ಇಬ್ಬರು ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ದಿಲ್ಲಿ ಪೊಲೀಸ್ ಆಯುಕ್ತರು ಹಾಗೂ ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯನ್ನು ಸಂಪರ್ಕಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರು ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿದ್ದರು.
2020ರ ಆಗಸ್ಟ್ 26ರಂದು ಕೆಳ ನ್ಯಾಯಾಲಯವು ಈ ದೂರನ್ನು ವಜಾಗೊಳಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಅಗತ್ಯವಿದೆ ಎಂದು ಹೇಳಿತ್ತು.
ನಂತರ 2022ರ ಜೂನ್ 13ರಂದು ದೆಹಲಿ ಹೈಕೋರ್ಟ್, ಇಬ್ಬರು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ, "ಈ ಹೇಳಿಕೆಗಳು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಲ್ಲ; ಹಿಂಸಾಚಾರ ಅಥವಾ ಸಾರ್ವಜನಿಕ ಶಾಂತಿ ಭಂಗಕ್ಕೆ ಪ್ರಚೋದಿಸುವುದಿಲ್ಲ" ಎಂದು ಉಲ್ಲೇಖಿಸಿತ್ತು.
ಆದರೆ, ಈ ತಾರ್ಕಿಕತೆಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಒಪ್ಪಲಿಲ್ಲ. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಡಿ ಪೂರ್ವಾನುಮತಿ ಅಗತ್ಯವಿರುವುದು ಮ್ಯಾಜಿಸ್ಟ್ರೇಟ್ ವಿಚಾರಣೆಗೆ ತೆಗೆದುಕೊಳ್ಳುವ ಹಂತದಲ್ಲಿ ಮಾತ್ರ ಅನ್ವಯಿಸುತ್ತದೆ, ಅದರ ಮೊದಲು ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
"ಎಫ್‌ಐಆರ್ ದಾಖಲಿಸುವುದು ಅಥವಾ ಪ್ರಾಥಮಿಕ ತನಿಖೆಯ ಹಂತದಲ್ಲಿ ಯಾವುದೇ ನಿರ್ಬಂಧ ವಿಧಿಸಲು ಅವಕಾಶವಿಲ್ಲ. ಮೊದಲು ಗುರುತಿಸಬಹುದಾದ ಅಪರಾಧದ ಮಾಹಿತಿ ಸ್ವೀಕರಿಸಬೇಕು; ನಂತರ ಎಫ್‌ಐಆರ್ ದಾಖಲಿಸಬೇಕು; ತನಿಖೆ ನಡೆಸಬೇಕು; ಬಳಿಕ ವರದಿ ಸಲ್ಲಿಸಬೇಕು. ಆ ಹಂತದಲ್ಲೇ ವಿಚಾರಣೆಗೆ ತೆಗೆದುಕೊಳ್ಳುವ ಪ್ರಶ್ನೆ ಉದ್ಭವಿಸುತ್ತದೆ" ಎಂದು ಪೀಠ ತಿಳಿಸಿದೆ.
"ಗುರುತಿಸಬಹುದಾದ ಅಪರಾಧದ ಮಾಹಿತಿ ಲಭ್ಯವಾದಾಗ ಎಫ್‌ಐಆರ್ ದಾಖಲಿಸುವುದು ಕಡ್ಡಾಯ. ಈ ವಿಷಯದಲ್ಲಿ ಪೊಲೀಸರಿಗೆ ಯಾವುದೇ ವಿವೇಚನಾ ಅಧಿಕಾರವಿಲ್ಲ" ಎಂದು ಕೋರ್ಟ್ ಹೇಳಿದೆ.
"ಅಧಿಕಾರಿಗಳು ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಸಾಮಾನ್ಯ ನಾಗರಿಕರಿಗೆ ನ್ಯಾಯ ದೊರಕುವುದು ಕಷ್ಟವಾಗುತ್ತದೆ. ತನಿಖೆ ಕಾನೂನಿನ ಪ್ರಕಾರ ಹಾಗೂ ಯಾವುದೇ ಬಾಹ್ಯ ಒತ್ತಡವಿಲ್ಲದೆ ನಡೆಯಬೇಕು" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

