HEALTH TIPS

₹25,160 ಕೋಟಿ ವಿಮಾ ಮೊತ್ತ ಇತ್ಯರ್ಥ: ಸಚಿವೆ ನಿರ್ಮಲಾ ಸೀತಾರಾಮನ್

 ನವದೆಹಲಿ (PTI): 'ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ವಿಮಾ ಯೋಜನೆ' (ಪಿಎಂಜೆಜೆಬಿವೈ) ಮತ್ತು 'ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ'ಯಂತಹ (ಪಿಎಂಎಸ್‌ಬಿವೈ) ಜನಸುರಕ್ಷಾ ಯೋಜನೆಗಳು ಆರಂಭವಾದಾಗಿನಿಂದ ಇದುವರೆಗೆ ₹25,160 ಕೋಟಿ ಮೌಲ್ಯದ ಕ್ಲೇಮ್‌ಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ ಅವರು ದುರ್ಬಲ ವರ್ಗದ ಜನರು ಸೇರಿದಂತೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಆರ್ಥಿಕ ಭದ್ರತೆ ಕಲ್ಪಿಸಲು ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಮತ್ತು ಅಟಲ್ ಪಿಂಚಣಿ ಯೋಜನೆಗೆ (ಎಪಿವೈ) 2015ರ ಮೇ 9ರಂದು ಚಾಲನೆ ನೀಡಿದ್ದರು.

ಪ್ರಸ್ತುತ ಪಿಎಂಜೆಜೆಬಿವೈನಲ್ಲಿ 27 ಕೋಟಿಗೂ ಅಧಿಕ ಜನರು ನೋಂದಣಿ ಆಗಿದ್ದಾರೆ. ಪಿಎಂಎಸ್‌ಬಿವೈ ಅಡಿ 58 ಕೋಟಿ ಮತ್ತು ಅಟಲ್ ಪಿಂಚಣಿ ಯೋಜನೆಯಲ್ಲಿ 9 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ಪಿಎಂಜೆಜೆಬಿವೈ ಅಡಿ 10.7 ಲಕ್ಷಕ್ಕೂ ಅಧಿಕ ಕುಟುಂಬಗಳ ₹21,500 ಕೋಟಿ ಮೊತ್ತದ ಕ್ಲೇಮ್‌ ಇತ್ಯರ್ಥಪಡಿಸಲಾಗಿದೆ.ಪಿಎಂಎಸ್‌ಬಿವೈ ಯೋಜನೆಯಲ್ಲಿ 1.84 ಲಕ್ಷ ಕುಟುಂಬಗಳಿಗೆ ₹3,660 ಕೋಟಿ ಮೌಲ್ಯದ ಕ್ಲೇಮ್‌ ಮಂಜೂರು ಮಾಡಲಾಗಿದೆ ಎಂದು ಸಚಿವರು ಶನಿವಾರ ತಿಳಿಸಿದ್ದಾರೆ.

'ಆನ್‌ಲೈನ್‌ ಜನ್‌ ಸುರಕ್ಷಾ ಪೋರ್ಟಲ್‌ ಮೂಲಕ ಜನರು ಬ್ಯಾಂಕ್‌ನ ಶಾಖೆ ಅಥವಾ ಅಂಚೆ ಕಚೇರಿಗೆ ಭೇಟಿ ನೀಡದೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಕ್ಲೇಮ್‌ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡಿರುವುದರಿಂದ ತ್ವರಿತವಾಗಿ ಕ್ಲೇಮ್‌ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ' ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.

ಪಿಎಂಜೆಜೆಬಿವೈ ಜೀವ ವಿಮಾ ಯೋಜನೆಯಾಗಿದ್ದು, ಇದಕ್ಕೆ ವಾರ್ಷಿಕವಾಗಿ ₹436 ಕಂತು ಪಾವತಿಸಬೇಕು. 18ರಿಂದ 50 ವರ್ಷದವರೆಗಿನವರು ಈ ಯೋಜನೆಗೆ ಅರ್ಹರು. ಚಂದಾದಾರರು ಮೃತಪಟ್ಟಾಗ ನಾಮನಿರ್ದೇಶಿತ ವ್ಯಕ್ತಿಗೆ ₹2 ಲಕ್ಷ ನೀಡಲಾಗುತ್ತದೆ. ಏಪ್ರಿಲ್‌ 29ರ ವೇಳೆಗೆ 12.72 ಕೋಟಿ ಮಹಿಳೆಯರು ಇದರಲ್ಲಿ ನೋಂದಣಿ ಆಗಿದ್ದಾರೆ.

ಪಿಎಂಎಸ್‌ಬಿವೈ ಯೋಜನೆಯ ವಾರ್ಷಿಕ ಪ್ರೀಮಿಯಂ ₹20. 18ರಿಂದ 70 ವರ್ಷದೊಳಗಿನವರು ಇದಕ್ಕೆ ಅರ್ಹರಾಗಿದ್ದು, ಅಪಘಾತದಿಂದ ಪಾಲಿಸಿದಾರರು ಮೃತಪಟ್ಟರೆ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾದರೆ ₹2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆಒಳಗಾದರೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ.

ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ನಿವೃತ್ತಿ ಜೀವನದ ಸಮಯದಲ್ಲಿ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶವನ್ನು ಅಟಲ್ ಪಿಂಚಣಿ ಯೋಜನೆ (ಎಪಿವೈ) ಹೊಂದಿದೆ. ಈ ಯೋಜನೆ ಅಡಿ ನೋಂದಾಯಿಸಿಕೊಂಡವರು ಪಾವತಿಸುವ ಮೊತ್ತಕ್ಕೆ ಅನುಗುಣವಾಗಿ, ವ್ಯಕ್ತಿಯ ವಯಸ್ಸು 60 ವರ್ಷವಾದಾಗ ಮಾಸಿಕ ₹1 ಸಾವಿರದಿಂದ ₹5 ಸಾವಿರದವರೆಗೆ ಪಿಂಚಣಿ ದೊರೆಯುತ್ತದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ನಿರ್ವಹಣೆ ಮಾಡುತ್ತದೆ.

18ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಅರ್ಹರು. ಚಂದಾದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ರೂಪದಲ್ಲಿ ಪಾವತಿ ಮಾಡಬೇಕಿರುತ್ತದೆ. ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

ಒಂದು ವೇಳೆ ಚಂದಾದಾರರು ವಯಸ್ಸು 60 ವರ್ಷ ಆಗುವುದರೊಳಗೆ ಮೃತಪಟ್ಟರೆ, ಸಂಗಾತಿಯು ಯೋಜನೆಗೆ ನೀಡುವ ಕೊಡುಗೆಯನ್ನು ಮುಂದುವರಿಸಬಹುದಾಗಿದೆ ಅಥವಾ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಪ್ರಸಕ್ತ ವರ್ಷದ ಏಪ್ರಿಲ್ 30ರ ವೇಳೆಗೆ ಈ ಯೋಜನೆಯಡಿ 9.04 ಕೋಟಿ ಜನರು ನೋಂದಣಿ ಆಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries