ಹೈದರಾಬಾದ್: ರಸ್ತೆಯಲ್ಲಿ ಸಾಗುವಾಗ ಯೂಟರ್ನ್ ವಿಚಾರಕ್ಕೆ ಆರಂಭವಾದ ಗಲಾಟೆಯು, ಕಾರಿನ ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎರಡು ಕಿ.ಮೀ ಎಳೆದೊಯ್ದ ಘಟನೆಯು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮೇ.1ರ ರಾತ್ರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ತಂದೆ ಮತ್ತು ಮಗನು ದ್ವಿ
ಚಕ್ರ ವಾಹನದಲ್ಲಿ ಮೀರಪೇಟೆಯಿಂದ ಎಲ್.ಬಿ. ನಗರಕ್ಕೆ ಸಂಚರಿಸುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಕಾರು ಕೂಡ ಬರುತ್ತಿತ್ತು. ಕಾರಿನ ಮುಂದೆಯಿದ್ದ ಬೈಕ್ ಸವಾರ, ಯೂಟರ್ನ್ ಸೂಚನೆ ನೀಡಿದ್ದಾನೆ. ಈ ವೇಳೆ ಕೋಪಗೊಂಡ ಕಾರಿನ ಚಾಲಕ, ಯೂಟರ್ನ್‌ಗೆ ಇನ್ನೂ 500 ಮೀಟರ್ ದೂರವಿದೆ, ಇಷ್ಟು ಬೇಗ ಏಕೆ ಸೂಚನೆ ನೀಡಿದೆ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಿದ್ದಾರೆ.ಈ ವೇಳೆ, ಕೋಪಗೊಂಡ ಕಾರಿನ ಚಾಲಕ ಬೈಕ್ ಸವಾರನ ಕೂದಲನ್ನು ಹಿಡಿದೆಳೆದಿದ್ದಾನೆ. ನಂತರ ಬೈಕ್ ಸವಾರನನ್ನು ಕಾರಿನ ಮೂಲಕ ಅಟ್ಟಾಡಿಸಲು ಆರಂಭಿಸಿದ್ದಾನೆ. ಇದನ್ನು ನೋಡಿದ ಬೈಕ್ ಸವಾರನ ತಂದೆ, ಕಾರನ್ನು ತಡೆಯಲು ಅದರ ಬಾನೆಟ್ ಮೇಲೇರಿದ್ದಾರೆ. ಆದರೆ, ಕಾರನ್ನು ನಿಲ್ಲಿಸದೇ, ಅದರ ಚಾಲಕ ಎರಡು ಕಿ.ಮೀ ಸಾಗಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ರಸ್ತೆಯಲ್ಲಿ ಬಿದ್ದು ನನ್ನ ಮಗನಿಗೆ ಗಾಯವಾಗಿದೆ ಎಂದು ಬೈಕ್ ಸವಾರನ ತಂದೆ ಆರೋಪಿಸಿದ್ದಾರೆ.
ಬೈಕ್ ಸವಾರನ ತಂದೆ, ಕಾರು ಚಾಲಕನ ಮೇಲೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಕುರಿತು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

