ಕೋಝಿಕ್ಕೋಡ್: ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ, ಎರಡು ದಶಕ ಜೈಲು ಶಿಕ್ಷೆ ಅನುಭವಿಸಿದ ಅಬ್ದುಲ್ ರಹೀಂ, ಮಾಡಿದ ತಪ್ಪನ್ನು ಕ್ಷಮಿಸುವುದಕ್ಕಾಗಿ ಸಂತ್ರಸ್ತರ ಕುಟುಂಬದವರಿಗೆ ಪರಿಹಾರದ ರೂಪದಲ್ಲಿ ₹34 ಕೋಟಿ 'ಬ್ಲಡ್ ಮನಿ' ಪಾವತಿಸುವ ಮೂಲಕ, ಬಿಡುಗಡೆಯಾಗಿ ಕೇರಳಕ್ಕೆ ಮರಳಿದ್ದಾರೆ.
ಅಬ್ದುಲ್ ರಹೀಂ ಪಾವತಿಸಬೇಕಿದ್ದ 'ಬ್ಲಡ್ ಮನಿ'ಯನ್ನು (ಕ್ಷಮೆಗಾಗಿ ಪರಿಹಾರ), ಅವರ ತವರು ಜಿಲ್ಲೆಯಾದ ಕೇರಳಂನ ಕೋಯಿಕ್ಕೋಡ್‌ನ ಜನರು 'ಕ್ರೌಡ್ ಫಂಡಿಂಗ್' ಮೂಲಕ ಸಂಗ್ರಹಿಸಿ, ಪಾವತಿಸಿದ್ದಾರೆ. ಇದು ಕೇರಳಂನಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹವಾದ ಗರಿಷ್ಠ ಮೊತ್ತವಾಗಿದೆ.
ಗುರುವಾರ ಕೇರಳಂಗೆ ಬಂದಿಳಿದ ಅವರನ್ನು ಇಲ್ಲಿನ ಕರಿಪುರ ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರು, ಬಂಧುಗಳು ಆತ್ಮೀಯವಾಗಿ ಸ್ವಾಗತಿಸಿದರು.ವಿಮಾನ ನಿಲ್ದಾಣದಲ್ಲಿ ಉದ್ಯಮಿ ಬಾಬಿ ಚೆಮ್ಮನ್ನೂರ್ ಅವರು ಅಬ್ದುಲ್ ರಹೀಂ ಅವರನ್ನು ಆಲಂಗಿಸಿಕೊಂಡು ಹೊರಗೆ ಕರೆದುಕೊಂಡು ಬಂದರು.
'ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಕೃತಜ್ಞತನಾಗಿದ್ದೇನೆ' ಎಂದು ರಹೀಂ ಗದ್ಗದಿತರಾಗಿ ನುಡಿದರು.
ಎರಡು ದಶಕಗಳ ಬಳಿಕ, ಬಕ್ರೀದ್ ಹಬ್ಬದ ದಿನದಂದೇ ಮನೆಗೆ ಮರಳಿದ ಮಗನನ್ನು ಕಂಡು ತಾಯಿ ಫಾತಿಮಾ ಬಿಗಿದಪ್ಪಿಕೊಂಡು ಆನಂದಭಾಷ್ಪ ಸುರಿಸಿದರು. ಕೋಯಿಕ್ಕೋಡ್‌ನಲ್ಲಿರುವ ಅಬ್ದುಲ್ ರಹೀಂ ಅವರ ನಿವಾಸವು ಬಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅವರ ಸ್ನೇಹಿತರು ಮತ್ತು ಸ್ಥಳೀಯರು ಅವರನ್ನು ಸ್ವಾಗತಿಸಲು ಸೇರಿದ್ದರು. ಎಲ್ಲರನ್ನು ನೋಡುತ್ತಿದ್ದಂತೆ ಅಬ್ದುಲ್ ರಹೀಂ ಅವರು ಕಣ್ಣಾಲಿಗಳು ತುಂಬಿಬಂದವು.
ರಹೀಂ ಬಿಡುಗಡೆಗೆ ಒಂದಾದ ಕೇರಳಂ ಜನತೆ
20 ವರ್ಷದ ಅಬ್ದುಲ್ ರಹೀಂ 2006ರಲ್ಲಿ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಅಲ್ಲಿನ ಕುಟುಂಬವೊಂದರ ಕಾರು ಚಾಲಕರಾಗಿ ಅವರು ಕೆಲಸ ಮಾಡುತ್ತಿದ್ದರು. ಒಮ್ಮೆ ಈ ಕುಟುಂಬದ ವಿಶೇಷ ಸಾಮರ್ಥ್ಯ ಹೊಂದಿರುವ ಬಾಲಕನೊಬ್ಬ ರಹೀಂ ಜತೆಗೆ ಜಗಳವಾಡಿದ. ಈ ಸಂದರ್ಭದಲ್ಲಿ ಬಾಲಕನ ದೇಹದಲ್ಲಿ ಉಸಿರಾಟದ ಬೆಂಬಲಕ್ಕಾಗಿ ಅಳವಡಿಸಿದ್ದ ಉಪಕರಣ ಕಳಚಿ ಬಿತ್ತು.
ರಹೀಂ ಇದನ್ನು ಗಮನಿಸಿರಲಿಲ್ಲ. ಸ್ವಲ್ಪದರಲ್ಲೇ ಬಾಲಕ ಮೃತಪಟ್ಟ. ಆಕಸ್ಮಿಕವಾಗಿ ಸಂಭವಿಸಿದ ಈ ಘಟನೆಯಿಂದ ರಹೀಂ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಬೇಕಾಯಿತು. ಮೃತ ಬಾಲಕನ ಕುಟುಂಬವು 'ಕ್ಷಮಾದಾನ'ಕ್ಕೆ ಒಪ್ಪದ ಕಾರಣ 2018ರಲ್ಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
2024ರ ಏಪ್ರಿಲ್ 18ರಂದು ಅಬ್ದುಲ್ ರಹೀಂಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕೇರಳಂ ಜನತೆ ಅವರ ಬಿಡುಗಡೆಗಾಗಿ 'ಬ್ಲಡ್ ಮನಿ' ಪಾವತಿಸಲು ವಿಶೇಷ ಅಭಿಯಾನ ಪ್ರಾರಂಭಿಸಿದರು. ನಾಲ್ಕು ದಿನಗಳಲ್ಲಿ 15 ಮಿಲಿಯನ್ ಸೌದಿ ರಿಯಾಲ್ಸ್ (ಅಂದಾಜು ₹34 ಕೋಟಿ) ಸಂಗ್ರಹವಾಯಿತು. ಇದೀಗ ಎರಡು ದಶಕಗಳ ಜೈಲು ಶಿಕ್ಷೆ ಪೂರ್ಣಗೊಳಿಸಿ ರಹೀಂ ಸೌದಿ ಜೈಲಿನಿಂದ ಬಿಡುಗಡೆಯಾಗಿ ತವರಿಗೆ ಮರಳಿದ್ದಾರೆ.

