ಅದಾದ ಬಳಿಕ ಕೇವಲ ಎರಡೇ ವರ್ಷಗಳಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಬೈಪಾಸ್ ರಸ್ತೆ ಮತ್ತು ಭೂ-ಬಳಕೆಯ ಬದಲಾವಣೆಯಿಂದಾಗಿ ಈ ಜಮೀನಿನ ಮಾರುಕಟ್ಟೆ ಮೌಲ್ಯವು 11 ಪಟ್ಟು ಆಗಿದ್ದು,5.5 ಕೋಟಿ ರೂ.ಗಳಿಂದ 60 ಕೋಟಿ ರೂ.ಗಳಿಗೂ ಅಧಿಕ ಏರಿಕೆಯಾಗಿದೆ.
ತನಿಖಾ ವರದಿಯ ಪ್ರಕಾರ, ಮಧ್ಯಪ್ರದೇಶದ ಐಎಎಸ್ ದಿಲ್ಲಿಯಲ್ಲಿ ನಿಯೋಜಿತ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜೊತೆಗೆ ಮಹಾರಾಷ್ಟ್ರ, ತೆಲಂಗಾಣ ಮತ್ತು ಹರ್ಯಾಣ ಕೇಡರ್‌ಗಳಿಗೆ ಸೇರಿದ ಅಧಿಕಾರಿಗಳೂ ಭೂ ಖರೀದಿದಾರರಲ್ಲಿ ಸೇರಿದ್ದಾರೆ ಎಂದು ವರದಿಯು ತಿಳಿಸಿದೆ. ಈ ಖರೀದಿಯ ನಂತರ ನಡೆದ ಸರಣಿ ಬೆಳವಣಿಗೆಗಳು ಜನರ ಗಮನ ಸೆಳೆದಿದ್ದು, ಹಲವು ಅನುಮಾನಗಳನ್ನು ಸೃಷ್ಟಿಸಿವೆ.
ಭೂಮಿ ಖರೀದಿಸಿದ ಕೇವಲ 16 ತಿಂಗಳ ನಂತರ, ಅಂದರೆ ಆಗಸ್ಟ್ 2023ರಲ್ಲಿ ಮಧ್ಯಪ್ರದೇಶ ಸಚಿವ ಸಂಪುಟವು ಈ ಅಧಿಕಾರಿಗಳು ಖರೀದಿಸಿದ ಭೂಮಿಯಿಂದ ಕೇವಲ 500 ಮೀ.ಅಂತರದಲ್ಲಿ ಹಾದುಹೋಗುವ 3,200 ಕೋಟಿ ರೂ. ವೆಚ್ಚದ ಪಶ್ಚಿಮ ಬೈಪಾಸ್ ಯೋಜನೆಗೆ ಅನುಮೋದನೆ ನೀಡಿತು. ಖರೀದಿಯ ಸಮಯದಲ್ಲಿ ಈ ಜಮೀನು ಕೃಷಿ ಭೂಮಿಯಾಗಿತ್ತು. ಮಧ್ಯಪ್ರದೇಶ ಸರ್ಕಾರವು ಬೈಪಾಸ್ ಯೋಜನೆಗೆ ಅನುಮೋದನೆ ನೀಡಿದ 10 ತಿಂಗಳೊಳಗೆ ಈ ಭೂಮಿಯನ್ನು ವಸತಿ ಪ್ರದೇಶವನ್ನಾಗಿ ಪರಿವರ್ತಿಸಲಾಯಿತು ಎಂದು ವರದಿಯು ಬೆಟ್ಟು ಮಾಡಿದೆ.
ಬೈಪಾಸ್ ಅನುಮೋದನೆ ಮತ್ತು ಭೂ-ಬಳಕೆಯ ಬದಲಾವಣೆಯ ನಂತರ ಭೂಮಿಯ ಮೌಲ್ಯವು ಸುಮಾರು 11 ಪಟ್ಟು ಹೆಚ್ಚಾಗಿದೆ. ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಮರು ವರ್ಗೀಕರಿಸಲಾಗಿದ್ದರೂ ಅಲ್ಲಿ ಈವರೆಗೆ ಯಾವುದೇ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗಿಲ್ಲ. ಸಾಮಾನ್ಯ ನಿಯಮಗಳ ಪ್ರಕಾರ, ಯಾವುದೇ ವಸತಿ ಯೋಜನೆ ಪ್ರಾರಂಭವಾಗುವ ಮೊದಲು ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಥವಾ ಭೂಮಿಯನ್ನು ನೋಂದಾಯಿತ ಸೊಸೈಟಿಗೆ ವರ್ಗಾಯಿಸಬೇಕಾಗುತ್ತದೆ.
ಎಪ್ರಿಲ್ 4, 2022 ರಂದು 50 ಅಧಿಕಾರಿಗಳು ಒಂದೇ ನೋಂದಣಿ ದಾಖಲೆಯನ್ನು ಬಳಸಿ 2.023 ಹೆಕ್ಟೇರ್ ಕೃಷಿ ಭೂಮಿಯನ್ನು 5.5 ಕೋಟಿ ರೂ.ಗೆ ಖರೀದಿಸಿದ್ದರು. ಆದರೆ ಆ ಸಮಯದಲ್ಲಿ ಅದರ ಮಾರುಕಟ್ಟೆ ಮೌಲ್ಯವು 7.78 ಕೋಟಿ ರೂ. ಆಗಿತ್ತು ಎಂದು ವರದಿಯು ತಿಳಿಸಿದೆ. ಈಗ ಅದು 55 ಕೋಟಿ ರೂ.ನಿಂದ 65 ಕೋಟಿ ರೂ.ಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.

