ನವದೆಹಲಿ: 230 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು 8 ಗಂಟೆಗಳ ಕಾಲ ಆಗಸದಲ್ಲಿ ಇದ್ದು, ತಾಂತ್ರಿಕ ದೋಷದಿಂದ ದೆಹಲಿಗೆ ವಾಪಸ್ ಆಗಿದೆ.
ತಾಂತ್ರಿಕ ದೋಷದಿಂದ ವಿಮಾನ ಹಿಂದಿರುಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
'ಮೇ 27ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಎಐ173 ವಿಮಾನವು ತಾಂತ್ರಿಕ ದೋಷದಿಂದ ದೆಹಲಿಗೆ ಹಿಂದಿರುಗಿದೆ. ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಏರ್ ಇಂಡಿಯಾದ ಪ್ರಮಾಣಿತ ಸುರಕ್ಷತಾ ನಿಯಮಗಳಡಿ ತಾಂತ್ರಿಕ ಪರಿಶೀಲನೆ ನಡೆಯಲಿದೆ' ಎಂದು ಸಂಸ್ಥೆ ತಿಳಿಸಿದೆ.
ಮೂರು ಗಂಟೆಗಳ ಪ್ರಯಾಣದ ಬಳಿಕ ಚೀನಾ ವಾಯುಪ್ರದೇಶದಲ್ಲಿದ್ದ ವಿಮಾನ ಬಳಿಕ ಹಿಂದಿರುಗಲು ಆರಂಭಿಸಿತು ಎಂದು ವರದಿ ತಿಳಿಸಿದೆ.
ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ ಎಂದು ಸಂಸ್ಥೆ ಒತ್ತಿ ಹೇಳಿದೆ.
'ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಅವರನ್ನು ನಿಗದಿತ ಪ್ರದೇಶಗಳಿಗೆ ತಲುಪಿಸಲು ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ನಮ್ಮ ಸಿಬ್ಬಂದಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ, ಹೋಟೆಲ್ ಸೇರಿದಂತೆ ಬೇಕಾದ ಎಲ್ಲ ನೆರವನ್ನು ನೀಡಿದ್ದಾರೆ' ಎಂದು ಅದು ಹೇಳಿದೆ.
ಮೇ 21ರಂದು ಬೆಂಗಳೂರು ಮತ್ತು ದೆಹಲಿ ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ಎಂಜಿನ್‌ಗೆ ಬೆಂಕಿ ಹೊತ್ತುಕೊಂಡಿತ್ತು. ಇದರ ಬೆನ್ನಲ್ಲೇ ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ದೋಷ ಪತ್ತೆಯಾಗಿದೆ.

