ಕಾಸರಗೋಡು: ಕೇರಳ ರಾಜ್ಯದಾದ್ಯಂತ ಜೂ. 1ರಂದು ಶಾಲಾ ತರಗತಿ ಪುನರಾರಂಭಗೊಳ್ಳಲಿದ್ದು, ಶಾಲಾಮಟ್ಟ, ಪಂಚಾಯಿತಿ ಹಾಗೂ ಜಿಲ್ಲಾಮಟ್ಟದಲ್ಲಿ ಶಾಲಾ ಪ್ರವೇಶೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದೆ. ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ.
ಶಾಲಾ ಪಠ್ಯ ಪುಸ್ತಕ ವಿಳಂಬವಿಲ್ಲದೆ ಕೈಸೇರುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಪಠ್ಯ ಪುಸ್ತಕಗಳನ್ನು ಆಯಾ ಜಿಲ್ಲೆಯ ಪುಸ್ತಕ ಗೋದಾಮುಗಳಿಗೆ ತಲುಪಿಸಿದೆ.
2026-27ನೇ ಸಾಲಿನ ಪಠ್ಯಪುಸ್ತಕಗಳನ್ನು ಜಿಎಚ್‍ಎಸ್‍ಎಸ್ ಚೆಮ್ಮನಾಡ್ ಪರವನಡುಕ್ಕದ ಪಠ್ಯ ಗೋದಾಮಿನಿಂದ ಜಿಲ್ಲೆಯ ವಿವಿಧ ಶಾಲೆಗಳಿಗೆ ಪೂರೈಸುವ ಕೆಲಸ ಭರದಿಂದ ಸಾಗುತ್ತಿದೆ. ಬಹುತೇಕ ಪಠ್ಯಗಳು ಶಾಲಾ ವಿದ್ಯಾರ್ಥಿಗಳ ಕೈಸೇರಿದ್ದು, ಉಳಿದ ಪುಸ್ತಕ ಶೀಘ್ರ ತಲುಪಲಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ತಾಲೂಕಿನ ಶಾಲಾ ವಾಹನಗಳ ದಕ್ಷತೆ ತಪಾಸಣಾ ಕಾರ್ಯವೂ ಭರದಿಂದ ಸಾಗುತ್ತಿದೆ. ಕಾಸರಗೋಡು ತಾಲೂಕಿನ ಶಾಲಾ ವಾಹನಗಳ ತಪಾಸನೆ ಮೇ 30 ರಂದು ಬೆಳಗ್ಗೆ 9ಕ್ಕೆ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಮತ್ತು ಮಂಜೇಶ್ವರ ತಾಲೂಕಿನ ವಾಹನಗಳ ತಪಾಸಣೆ 30 ರಂದು ಬೆಳಗ್ಗೆ 9ಕ್ಕೆ ಉಪ್ಪಳ ಎ.ಜೆ.ಐ. ಇಂಗ್ಲಿಷ್ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಸಂಬಂಧಪಟ್ಟ ವಾಹನದ ಮೂಲ ದಾಖಲೆಗಳೊಂದಿಗೆ ಚಾಲನಾ ಪರವಾನಗಿ, ಜಿಪಿಎಸ್ ಪ್ರಮಾಣಪತ್ರ, ವಿದ್ಯಾವಾಹನ ಪ್ರಮಾಣಪತ್ರ ಮತ್ತು ವೇಗ ಮಿತಿ ನಿಯಂತ್ರಣ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಪ್ರಕಟಣೆ ತಿಳಿಸಿದೆ.
ಚೆಮ್ನಾಡ್ ಪಂಚಾಐಇತಿ ಪರವನಡ್ಕದ ಪಠ್ಯ ಗೋದಾಮಿನಿಂದ ಶಾಲಾ ಪಠ್ಯ ಪುಸ್ತಕಗಳ ವಿತರಣೆ ನಡೆಯುತ್ತಿದೆ.

