ಉಪ್ಪಳ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ), ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಪತ್ರಕರ್ತರ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಹಾಗೂ ಶಾಫಿ ಬಂಡಸಾಲೆ ಅವರ ಕೃತಿ ಪರಿಚಯ ಕಾರ್ಯಕ್ರಮ ಶನಿವಾರ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಿತು.
ಸಮಾರಂಭವನ್ನು ಕಲಿಕೋಪಕರಣ ವಿತರಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು, ರಾಷ್ಟ್ರೀಯತೆ ಬೆಳೆದಂತೆ ಗಡಿಗಳಿಗೆ ಹೆಚ್ಚು ಮಹತ್ವವಿಲ್ಲ. ಆದರೂ ಸ್ಥಳೀಯ ಸಂಸ್ಕøತಿ ಉಳಿಸಲು ಪ್ರಯತ್ನಗಳು ಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಡಿ ಪ್ರದೇಶಗಳ ಭಾಷಾ ಅಭಿವೃದ್ಧಿಗೆ ನೆರವು ನೀಡುತ್ತಿದೆ ಎಂದರು.
ಆಂಗ್ಲ ಭಾಷಾ ಪ್ರೇಮದ ಭರಾಟೆಯಲ್ಲಿ ಕನ್ನಡ ಸಹಿತ ಪ್ರಾದೇಶಿಕ ಭಾಷೆಗಳಿಗೆ ತೀವ್ರ ಅಪಾಯ ಕಾಡಿದೆ. ದ್ವಿಭಾಷೆ, ತ್ರಿಭಾಷಾ ಕಲಿಕೆಗಳಂತಹ ಉಉಕ್ರಮಗಳೂ ಪರಿಣಾಮಕಾರಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮಗಳ ಮೂಲಕ ಪತ್ರಕರ್ತರು ಪ್ರಾದೇಶಿಕ ಮಟ್ಟದಲ್ಲಿ ಭಾಷಾಭಿಮಾನ, ಮನಸ್ಸುಗಳನ್ನು ಕಟ್ಟಿಕೊಡಲು ಮಾಡುತ್ತಿರುವ ಯತ್ನಗಳು ಶ್ಲಾಘನೀಯ. ಸಂಘಟಿತರಾಗಿ ಪತ್ರಕರ್ತರು ಬಲಗೊಂಡಷ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಲಿಕೋಪಕರಣ ವಿತರಣೆಯಂತಹ ಕಾರ್ಯಕ್ರಮಗಳು ಉತ್ತಮ ಉಪಕ್ರಮ ಎಂದವರು ತಿಳಿಸಿದರು.
ಈ ಸಂದರ್ಭ ಮಂಜೇಶ್ವರದ ನೂತನ ಶಾಸಕ ಎಕೆಎಂ ಅಶ್ರಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ಮಾತನಾಡಿ, ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಕಾಪಿಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಕೇರಳದ ನೂತನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕರಡು ಯೋಜನೆ ರಚಿಸಲಾಗುತ್ತಿದೆ ಎಂದು ತಿಳಿಸಿದರು. ಇಲ್ಲಿಯ ಕನ್ನಡ ಉಳಿಯುವಿಕೆಗೆ ಪುಷ್ಠಿ ನೀಡಲು ಕೇರಳ ಸರ್ಕಾರದ ಮೂಲಕ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು. ದಮನಕಾರಿ ನೀತಿಗೆ ಸದನದಲ್ಲಿ ಅವಕಾಸ ನೀಡುವುದಿಲ್ಲ ಎಂದು ತಿಳಿಸಿದರು.
ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಂ.ಶಾಫಿ ಬಂಡಸಾಲ ಅವರ ಮನದ ಮಾತು ಕವನ ಸಂಕಲನದ ಬಗ್ಗೆ ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿದರು. ಕೃತಿಕಾರ ಎಂ.ಶಾಫಿ ಬಂಡಸಾಲೆ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್, ಸಾಮಾಜಿಕ ಕಾರ್ಯಕರ್ತೆ ಸುಜಾತಾ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ರಾಘವ ಚೇರಾಲು, ಮೊಹಮ್ಮದ್ ಅಝೀಂ ಮಣಿಮುಂಡ,ಇಬ್ರಾಹಿಂ ಕುಂಬಂಕುಝಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಆರ್ಯಭಟ ಪ್ರಶಸ್ತಿ ವಿಜೇತ ಪ್ರೊ.ಎ.ಶ್ರೀನಾಥ್ ಕಾಸರಗೋಡು ಹಾಗೂ ಯುವ ವೈದ್ಯೆ ಡಾ.ಷಸಾ ಅವರನ್ನು ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಜಯ ಮಣಿಯಂಪಾರೆ ವಂದಿಸಿದರು. ಪುರುಷೋತ್ತಮ ಭಟ್.ಕೆ. ಕಾರ್ಯಕ್ರಮ ನಿರೂಪಿಸಿದರು. ಎ.ಆರ್.ಸುಬ್ಬಯ್ಯಕಟ್ಟೆ ಸಹಕರಿಸಿದರು.

.jpg)
.jpg)
.jpg)
