ಪೆರ್ಲ: ನಿನ್ನೆ ಸಂಜೆ ಬೀಸಿದ ಪ್ರಬಲ ಗಾಳಿಯಿಂದಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಘಟನೆ ಎಣ್ಮಕಜೆ ಶೇಣಿ ಮಣಿಯಂಪಾರೆಯಲ್ಲಿ ನಡೆದಿದೆ. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮಣಿಯಂಪಾರೆಯಲ್ಲಿ ಅವಘಡ ಸಂಭವಿಸಿದೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಆದರೆ ಪ್ರಯಾಣಿಕನಾಗಿದ್ದ ವೈದ್ಯರು ಯಾವುದೇ ಗಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
ಸೀತಾಂಗೋಳಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಪೆರ್ಲ ಮೂಲದ ಡಾ. ವಿಷ್ಣು ಪ್ರಸಾದ್ ಅವಘಡದಲ್ಲಿ ಕೂದಳೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಉಕಿನಡ್ಕ ನೆಲ್ಲಿಕುಂಜೆಯಲ್ಲಿ ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ಲಿನಿಕ್ ನಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಬಲ ಗಾಳಿಯಿಂದಾಗಿ, ರಸ್ತೆಬದಿಯಲ್ಲಿದ್ದ ದೊಡ್ಡ ಮರವು ಇದ್ದಕ್ಕಿದ್ದಂತೆ ಕಾರಿನ ಮೇಲೆ ಬಿದ್ದಿತು.
ಅವಘಡದಲ್ಲಿ ಕಾರು ಸಂಪೂರ್ಣವಾಗಿ ನಾಶವಾಯಿತು. ಮರ ಬಿದ್ದ ಕಾರಣ, ಹತ್ತಿರದ ವಿದ್ಯುತ್ ಕಂಬ ಮತ್ತು ತಂತಿಗಳು ಧರಾಶಾಯಿಯಾದವು. ಇದರೊಂದಿಗೆ, ಆ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಕೂಡ ಸ್ಥಗಿತಗೊಂಡಿತು. ಅವಘಡ ಕಂಡ ತಕ್ಷಣ, ಸ್ಥಳೀಯರು ರಕ್ಷಣೆಗೆ ಧಾವಿಸಿ ಕಾರಿನೊಳಗೆ ಸಿಲುಕಿದ್ದ ವೈದ್ಯರನ್ನು ಹೊರತೆಗೆದರು. ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಸ್ಥಳೀಯರು ನಿರಾಳರಾಗಿದ್ದಾರೆ.



